ಶಿವಮೊಗ್ಗ : ಭದ್ರಾವತಿ ನಗರಸಭೆಯ ವಾರ್ಡ್ ನಂ. 29ರ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಭದ್ರಾವತಿ ಶಾಸಕರಾಗಿ ಬಿ.ಕೆ. ಸಂಗಮೇಶ್ ಇದ್ದರೂ ಕೂಡ ಇಲ್ಲಿ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ. ಈ ಮೂಲಕ ಜೆಡಿಎಸ್ನ ಭದ್ರಾವತಿಯ ಅಧಿಪತಿ ಅಪ್ಪಾಜಿಗೌಡರು ಇಲ್ಲವಾದರೂ, ಅವರ ಹವಾ ಇನ್ನೂ ಮುಂದುವರೆದಿದೆ. ಅದರಂತೆ, ಇಂದು ನಡೆದ ಫಲಿತಾಂಶದಲ್ಲಿ ಜೆಡಿಎಸ್ ನ ನಾಗರತ್ನ ಅನಿಲ್ ಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. 1282 ಮತಗಳನ್ನು ಪಡೆದ ನಾಗರತ್ನ ಅನಿಲ್ ಭರ್ಜರಿ ಗೆಲುವು ಸಾಧಿಸಿದ್ದು, ಈ ವಾರ್ಡ್ ನಲ್ಲಿರುವ 3,423 ಮತಗಳ ಪೈಕಿ 2,200 ಮತಗಳು ಚಲಾವಣೆಗೊಂಡಿದ್ದವು.
ಅದರಂತೆ, ಕಾಂಗ್ರೆಸ್ ಅಭ್ಯರ್ಥಿ ಲೋಹಿತಾ ನಂಜಪ್ಪ 832 ಮತ ಪಡೆದುಕೊಂಡಿದ್ದರೆ, ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಗೆ 70 ಮತಗಳು ಲಭ್ಯವಾಗಿವೆ. ಈ ಮೂಲಕ ಬಿಜೆಪಿಗೆ ಭದ್ರಾವತಿಯಲ್ಲಿ ಸ್ಥಾನ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇನ್ನು 16 ಮತಗಳು, ನೋಟಾಕ್ಕೆ ಬಿದ್ದಿದ್ದು, ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ, ಭದ್ರಾವತಿಯಲ್ಲಿ ಜೆಡಿಎಸ್ ಅಭಿಮಾನಿಗಳ ಸಂಭ್ರಮ-ಸಡಗರ ಮುಗಿಲು ಮುಟ್ಟಿದ್ದು, ಜೆಡಿಎಸ್ ಕಾರ್ಯಕರ್ತರು, ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಈಗ ವಾರ್ಡ್ ನಂ. 29 ರ ಚುನಾವಣೆ ನಡೆಯಲು ಕಾರಣವೇನು ? : ಈ ಹಿಂದೆ ವಾರ್ಡ್ ನಂ. 29 ರ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಶೃತಿ ಮಂಜುನಾಥ್ (34) ಸಾವನಪ್ಪಿದ್ದರು. 2021 ರ ಏಪ್ರಿಲ್ 18 ರಂದು, ಚುನಾವಣೆ ವೇಳೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶೃತಿ ಅವರು, ಏಕಾಏಕೀ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ಅಂದು ಬೆಳಿಗ್ಗೆಯಿಂದ ತಮ್ಮ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅವರು, ಸಂಜೆ ಅಸ್ವಸ್ಥರಾಗಿ, ಉಸಿರಾಟದ ತೊಂದರೆಯಿಂದ ಬಳಲಿದ್ದರು. ಬಳಿಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ವಾರ್ಡ್ ನಂ. 29 ರ ಚುನಾವಣೆಯನ್ನು ಅಧಿಕಾರಿಗಳು ಮುಂದೂಡಿ ಆದೇಶಿಸಿದ್ದರು.