ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಯುವ ಕಾಂಗ್ರೆಸ್ ಘಟಕದ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಇಂದಿನ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಎತ್ತಿನಗಾಡಿಗಳು, ಟ್ರ್ಯಾಕ್ಟರ್ ಗಳು, ಬೈಕ್ ಗಳು ಪಾಲ್ಗೊಂಡಿದ್ದವು.
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಬಳಿಯಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಈ ಕಾರ್ಖಾನೆ ಸ್ಥಗಿತವಾಗಿ ಎರಡೂವರೆ ವರ್ಷಗಳೇ ಆಗಿವೆ. ಸರ್ಕಾರ ಈ ಕಾರ್ಖಾನೆಯನ್ನ ಖಾಸಗಿಯವರಿಗೆ ಗುತ್ತಿಗೆ ನೀಡಲು ನಿರ್ಧರಿಸಿದೆ. ಸರ್ಕಾರದ ಈ ನಡೆ ಖಂಡನೀಯ. ಕಾರ್ಖಾನೆಯನ್ನ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು. ಸರ್ಕಾರವೇ ಕಾರ್ಖಾನೆಯನ್ನ ಪುನರಾರಂಭ ಮಾಡಬೇಕು. ಸರ್ಕಾರ ಕಾರ್ಖಾನೆಯನ್ನ ಆರಂಭಿಸುವವರೆಗೂ ನಿರಂತರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.
ಇನ್ನು ಕೇಂದ್ರ ಸರ್ಕಾರ ದಿನ ಬಳಕೆಯ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನ ಬೇಕಾಬಿಟ್ಟಿ ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಈ ದರ ಏರಿಕೆಯಿಂದ ಬಡವರು, ಕೂಲಿಕಾರ್ಮಿಕರು, ರೈತರ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದ್ರು.
ಇನ್ನು ಮೈಶುಗರ್ ಕಾರ್ಖಾನೆಯಿಂದ ಆರಂಭವಾದ ಬೃಹತ್ ಪ್ರತಿಭಟನಾ ರ್ಯಾಲಿಯನ್ನ ಮಾಜಿ ಸಂಸದ ಡಾ.ಜಿ.ಮಾದೇಗೌಡ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುಲಿವಾನ ವಿಜಯ್ ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಕೊರೋನಾ ನಿಯಮ ಉಲ್ಲಂಘಿಸಿದ ಕೈ ಪಡೆ:
ಇಂದಿನ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕೊರೋನಾ ನಿಯಮ ಉಲ್ಲಂಘನೆ ಸ್ಪಷ್ಟವಾಗಿ ಕಾಣುತ್ತಿತ್ತು. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಪಾಲಿಸದ ಕೈ ನಾಯಕರು, ಕಾರ್ಯಕರ್ತರು ಗುಂಪು ಗುಂಪಾಗಿಯೇ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕೊರೋನಾ ಅಟ್ಟಹಾಸ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು, ಹಾಗೂ ಕೊವಿಡ್ ನಿಯಮ ಉಲ್ಲಂಘನೆ ಮಾಡಿದ್ರು ಸುಮ್ಮನಿದ್ದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಡೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಶಶಿಕುಮಾರ್, ಮಂಡ್ಯ.