ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಎಲೆಕ್ಷನ್ ವಾರ್ ಜೋರಾಗಿದೆ. ದೀದಿ ಕೋಟೆಗೆ ಲಗ್ಗೆ ಇಟ್ಟಿರೋ ಪ್ರಧಾನಿ ಮೋದಿ, ಬಂಗಾಳಿಗರ ಮತ ಬೇಟೆಯಾಡಿದ್ರು. ಮತ್ತೊಂದ್ಕಡೆ, ಬಿಜೆಪಿ ಆಡಳಿತ ವೈಫಲ್ಯವನ್ನ ಕುಟುಕಿದ ಟಿಎಂಸಿ ಮುಖ್ಯಸ್ಥೆ ಕೇಸರಿ ಪಡೆಗೆ ಟಾಂಗ್ ಕೊಟ್ರು. ಇತ್ತ ಚುನಾವಣೆ ಹೊತ್ತಿನಲ್ಲೆ ಕಚ್ಚ ಬಾಂಬ್ ಸ್ಫೋಟವಾಗಿರೋದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆಗೆ ಕೆಲ ದಿನಗಳ ಬಾಕಿ ಇರುವ ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಕಣ ರಂಗೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಸ್ಟಾರ್ ಪ್ರಚಾರಕರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಬಂಗಾಳದಲ್ಲಿ ಕೇಸರಿ ಧ್ವಜ ಹಾರಿಸೋಕೆ ಬಿಜೆಪಿ ಪಣ ತೊಟ್ಟಿದ್ದು, ದೀದಿ ಕೋಟೆಯಲ್ಲಿ ಪ್ರಧಾನಿ ಮೋದಿ ದಂಡಯಾತ್ರೆ ಮುಂದುವರೆದಿದೆ. ಪುರುಲಿಯಾದಲ್ಲಿ ಚನಾವಣಾ ಪ್ರಚಾರ ಮಾಡಿದ ನಮೋ, ಪಶ್ಚಿಮ ಬಂಗಾಳದಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯಗಳಿಗೆ ಉದ್ಯೋಗವಕಾಶ ಕಲ್ಪಿಸಲಿದೆ. ನೀರಿನ ಕೊರತೆಯಿಂದಾಗಿ ಇಲ್ಲಿನ ಜನತೆ ಅನುಭವಿಸುತ್ತಿರುವ ಸಂಕಷ್ಟಗಳು ನನಗೆ ಗೊತ್ತಿದೆ. ಆದ್ರೆ, ದೀದಿ ಸರ್ಕಾರ ಕೃಷಿಯನ್ನು ಬಿಟ್ಟು, ತನ್ನ ಸ್ವಂತ ಆಟದಲ್ಲಿ ಬ್ಯುಸಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಮೋದಿ ಸಮಾವೇಶಕ್ಕೆ ಪ್ರತಿಯಾಗಿ ರಾಜ್ಯದ ಹಲವೆಡೆ ಬಿರಿಸಿನ ಪ್ರಚಾರ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ, ಬಂಗಾಳ ಗೆದ್ದ ಮೇಲೆ ದೆಹಲಿ ಕೋಟೆಗೆ ಲಗ್ಗೆ ಇಡೋದಾಗಿ ಘೋಷಣೆ ಮಾಡಿದ್ದಾರೆ. ಅಮ್ಲಾಸುಲಿ ಮತ್ತು ಖರಗ್ಪುರದಲ್ಲಿ ದೀದಿ ಸಮಾವೇಶ ನಡೆಸಿದ ಮಮತಾ, ಬಿಜೆಪಿ ಒಡೆದು ಆಳುವ ನೀತಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಸದ್ಯ ನನ್ನ ಚಿತ್ತ ಬಂಗಾಳ ಗೆಲ್ಲೋದು. ಮುಂದೆ ನನ್ನ ಗುರಿ ಏನಿದ್ರು ದೆಹಲಿ ಕೋಟೆ ಗೆಲ್ಲೋದು ಎಂದು ಬಹಿರಂಗವಾಗಿ 2024ರಲ್ಲಿ ಪ್ರಧಾನಿ ಹುದ್ದೆಗೆ ಫೈಟ್ ಮಾಡುವುದಾಗಿ ಘೋಷಣೆ ಮಾಡಿದರು.
ಚುನಾವಣೆ ಕಾವು ಜೋರಾಗುತ್ತಿರೋ ಹೊತ್ತಲ್ಲೇ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ 5 ಕಚ್ಚಾ ಬಾಂಬ್ಗಳು ಪತ್ತೆಯಾಗಿವೆ. ಮಾಲ್ಡಾ ಸಮೀಪದ ಮಾವಿನ ತೋಪಿನಲ್ಲಿ ಬಾಂಬ್ ಪತ್ತೆಯಾಗಿದ್ದು, ಜನರಲ್ಲಿ ಭೀತಿ ಸೃಷ್ಟಿಸಿದೆ. ಇತ್ತ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕಚೇರಿಯಲ್ಲಿ 15 ಹೆಚ್ಚು ಬಾಂಬ್ಗಳು ಪತ್ತೆಯಾಗಿರೋದು ಸಂಶಯ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಂಸದರು, ತೃಣಮೂಲ ಕಾಂಗ್ರೆಸ್ ಗೂಂಡಾಗಳು ನಮ್ಮ ಮನೆಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣಾ ಚಕ್ರವ್ಯೂಹದಲ್ಲಿ ಬಿಜೆಪಿ – ಟಿಎಂಸಿ ನಡುವೆ ನೇರಾ ಹಣಾಹಣಿ ನಡೆಯುತ್ತಿದೆ . ಈ ಹೊತ್ತಿನಲ್ಲೆ ಕಚ್ಚಾ ಬಾಂಬ್ಗಳು ಪತ್ತೆಯಾಗಿರೋದು ಸಾಕಷ್ಟು ಆತಂಕ ಮೂಡಿಸಿದೆ. ಇದು ಪೂರ್ವಯೋಜಿತ ಒಳಸಂಚಾ..? ಇಲ್ಲ ಪ್ರಚಾರದ ಗಿಮಿಕ್ಕಾ..? ಎಂಬುದನ್ನ ತನಿಖೆ ನಡೆಸೋ ಪೊಲೀಸರು ಬಯಲಿಗೆಳೆಯಬೇಕಿದೆ.