ಬೆಂಗಳೂರು: ಮಂತ್ರಿ ಸ್ಥಾನ ಪಡೆಯಲು ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರ ಪ್ರಯತ್ನ ಮುಂದುವರೆದಿದೆ. ಹೈಕಮಾಂಡ್ ಮೂಲಕ ಒತ್ತಡ ಹೇರಲು ಮುಂದಾಗಿದ್ದಾರೆ. ಹೀಗಾಗಿ, ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಬಿಜೆಪಿ ಹೈಕಮಾಂಡಿನ ಪ್ರಭಾವಿ ನಾಯಕ ಭೂಪೇಂದ್ರ ಯಾದವ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಭೂಪೇಂದ್ರ ಯಾದವ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ವಿಶ್ವನಾಥ್ ಅವರು ಭೂಪೇಂದ್ರ ಯಾದವ್ ಅವರ ನಿವಾಸಕ್ಕೆ ತೆರಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮೃತ ಧರ್ಮೇಗೌಡರ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ. ಸದ್ಯ ವಿಶ್ವನಾಥ್ ಅವರ ಹೆಸರು ಪರಿಷತ್ ಗೆ ನಾಮ ನಿರ್ದೇಶನವಾಗಿದೆ. ನಾಮ ನಿರ್ದೇಶನದ ಕಾರಣಕ್ಕೆ ಮಂತ್ರಿ ಸ್ಥಾನ ಆಗಲು ತಡೆಯಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ವಿಶ್ವನಾಥ್ ಆಯ್ಕೆಯಾಗಲೇಬೇಕು. ಅದಕ್ಕಾಗಿ ಧರ್ಮೇಗೌಡರ ಸಾವಿನಿಂದ ತೆರವಾಗಿರುವ ಸ್ಥಾನದ ಮೇಲೆ ವಿಶ್ವನಾಥ್ ಕಣ್ಣಿಟ್ಟಿದ್ದಾರೆ. ಹೀಗಾಗಿ ಧರ್ಮೇಗೌಡರ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಬಿಜೆಪಿ ಹೈಕಮಾಂಡ್ ಗೆ ವಿಶ್ವನಾಥ್ ಒತ್ತಡ ಹಾಕುತ್ತಿದ್ದಾರೆ.
ಇನ್ನು, ಫೆ. 17ರಂದು ವಿಶ್ವನಾಥ್ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.