ಬೆಂಗಳೂರು: ಸಿದ್ದರಾಮಯ್ಯ ‘ಹಿಂದ್’ ಸಮಾವೇಶಕ್ಕೆ ಚಾಲನೆ ನೀಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹಿಂದುಳಿದ ಹಾಗೂ ದಲಿತ ಸಮುದಾಯಗಳನ್ನ ಒಗ್ಗೂಡಿಸಲು ನಿರ್ಧರಿಸಿದ್ದಾರೆ. ನಾನು ಒಂದು ಸಮುದಾಯದ ನಾಯಕನಲ್ಲ. ನಾನು ಅಹಿಂದ ನಾಯಕ ಅನ್ನೋದನ್ನ ಪ್ರೂವ್ ಮಾಡೋಕೆ ಹೊರಟಿದ್ದಾರೆ. ಹೀಗಾಗಿ ಹೈಕಮಾಂಡ ಭೇಟಿ ಮಾಡಿ ಒಪ್ಪಿಗೆ ಪಡೆಯಲು ಪ್ಲಾನ್ ರೆಡಿ ಮಾಡಿಕೊಂಡಿದ್ದಾರೆ.
ಹಿಂದುತ್ವದ ಮೂಲಕವೇ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರು ಕಾಂಗ್ರೆಸ್ ನಿರ್ನಾಮ ಮಾಡೋಕೆ ಹೊರಟಿದ್ದಾರೆ. ಈಗಾಗ್ಲೇ ಇದೇ ಅಸ್ತ್ರವನ್ನಿಟ್ಟುಕೊಂಡು ನಿರಂತರ ಪ್ರಯತ್ನವನ್ನೂ ಮಾಡ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯದಲ್ಲೂ ಈ ಮೂಲಕವೇ ಅಧಿಕಾರವನ್ನೂ ಹಿಡಿದಿದ್ದಾರೆ. ಸಣ್ಣ ಸಣ್ಣ ಪಕ್ಷಗಳು ಈಗಾಗ್ಲೇ ಮೂಲೆ ಸೇರುವಂತೆ ಮಾಡಿದ್ದಾರೆ. ಇನ್ನು, ಅಲ್ಪ ಸ್ವಲ್ಪ ಉಳಿದಿರೋದು ಕಾಂಗ್ರೆಸ್ ಮಾತ್ರ. ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳು ಇನ್ನು ಕಾಂಗ್ರೆಸ್ ನಲ್ಲಿ ಇವೆ ಅಂತಾ ಅವರು ಅಂದುಕೊಂಡಿದ್ದಾರೆ. ಅದರ ಮುಂದುವರೆದ ಭಾಗವಾಗಿ ಹಿಂದುಳಿದ ವರ್ಗಗಳನ್ನ ತನ್ನತ್ತ ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನ ಮುಂದುವರಿಸಿದ್ದಾರೆ.
ಇನ್ನು, ಸಿದ್ದರಾಮಯ್ಯ ಹಿಂದೆ ನಿಂತಿದ್ದ ಕುರುಬ ಸಮುದಾಯದ ಬುಡವನ್ನೂ ಅಲ್ಲಾಡಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯಗೆ ಸಣ್ಣ ಆತಂಕ ಎದುರಾಗಿದೆ. ನಾವು ಸುಮ್ಮನಾದ್ರೆ ಮುಂದೊಂದು ದಿನ ದಲಿತರನ್ನೂ ಬಿಜೆಪಿಯವರು ಸೆಳೆಯೋದ್ರಲ್ಲಿ ಯಶಸ್ವಿಯಾಗ್ತಾರೆ ಅಂತ ಟಗರು ಆತಂಕಗೊಂಡಿದ್ದಾರೆ. ಹೀಗಾಗಿ ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ಪ್ರತಿಯಾಗಿ ಮತ್ತೊಮ್ಮೆ ಹಿಂದ್ ಅಸ್ತ್ರವನ್ನ ಎಸೆಯಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ.
ಈಗ ಬಿಜೆಪಿಯ ಹಿಂದುತ್ವಾಸ್ತ್ರಕ್ಕೆ ಪ್ರತಿಯಾಗಿ ಸಿದ್ದು ಅಹಿಂದಾಸ್ತ್ರ ಪ್ರಯೋಗ ಮಾಡ್ತಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಕುರುಬರು, ಕ್ಷೌರಿಕರು, ನೇಕಾರರು, ಕುಂಬಾರರು,ಉಪ್ಪಾರರು, ತಿಗಳರು ಸೇರಿದಂತೆ ಸಣ್ಣ ಪುಟ್ಟ ಸಮುದಾಯಗಳನ್ನ ಒಗ್ಗೂಡಿಸಲು ಮಾಜಿ ಸಿಎಂ ಹೊರಟಿದ್ದಾರೆ. ಈ ಸಮುದಾಯಗಳ ಲೀಡರ್ಗಳನ್ನ ಒಗ್ಗೂಡಿಸಿಕೊಂಡು ಕಾಂಗ್ರೆಸ್ ಬಲಪಡಿಸೋಕೆ ಮುಂದಾಗಿದ್ದಾರೆ. ಹೀಗಾಗಿ ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತಿದ್ದು, ಹೋರಾಟದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಲ್ಲದೇ ಈ ಹೋರಾಟದಿಂದ ಕಾಂಗ್ರೆಸ್ ಪಕ್ಷ ಸಂಘಟನೆಗೆ ಎಷ್ಟು ಮುಖ್ಯ ಅಂತಾ ಹೈಕಮಾಂಡಗೆ ಮನವರಿಕೆ ಮಾಡಿಸಲಿದ್ದಾರೆ.
ಸಿದ್ದರಾಮಯ್ಯ ಬಿಜೆಪಿ ಹಿಂದುತ್ವಕ್ಕೆ ಪ್ರತಿಯಾಗಿ ಅಹಿಂದ ಅಸ್ತ್ರವನ್ನ ಪ್ರಯೋಗಿಸೋಕೆ ಹೊರಟಿದ್ದಾರೆ. ಈ ಸಮಾವೇಶಗಳನ್ನ ನಡೆಸೋಕೆ ತನ್ನ ಆಪ್ತ ಗೆಳೆಯ, ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಜೊತೆ ಮಾತುಕತೆಯನ್ನೂ ನಡೆಸಿದ್ದರು. ಅಷ್ಟರಲ್ಲಿ ಸಿದ್ದು ಸಮಾವೇಶಕ್ಕೆ ಸ್ವಪಕ್ಷೀಯ ನಾಯಕರೇ ಬ್ರೇಕ್ ಹಾಕೋ ಪ್ರಯತ್ನ ನಡೆಸಿದ್ದರು. ಆದರೆ ರಾಹುಲ್ ಗಾಂಧಿ ಭೇಟಿ ಮಾಡುವ ಮೂಲಕ ವಿರೋಧಿಗಳಿಗೆ ಟಕ್ಕರ್ ನೀಡಲು ಟಗರು ರೆಡಿಯಾಗಿದೆ. ಆದರೆ, ಸಿದ್ದರಾಮಯ್ಯ ದೆಹಲಿ ಪ್ರವಾಸ ಯಶಸ್ವಿಯಾಗುತ್ತಾ ಅಂತ ಕಾದು ನೋಡಬೇಕು.