ಬೆಂಗಳೂರು: ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರನ್ನು ತಮ್ಮ ಆತ್ಮೀಯ ಗೆಳೆಯ ಎಂದು ಕರೆದಿರುವ ಪ್ರಧಾನಿ ಮೋದಿ, ಆಜಾದ್ ಓರ್ವ ಉತ್ತಮ ಸಂಸದೀಯ ಪಟು ಎಂದು ಹೊಗಳಿದ್ದಾರೆ.
ಗುಲಾಂ ನಬಿ ಆಜಾದ್ ಸೇರಿದಂತೆ ಒಟ್ಟು ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್ ಉದ್ದೇಶಿಸಿ ಆತ್ಮೀಯ ವಿದಾಯ ಭಾಷಣ ಮಾಡಿದರು. ಗುಲಾಂ ನಬಿ ಆಜಾದ್ ಅವರಂತಹ ಉತ್ತಮ ಸಂಸದೀಯ ಪಟು, ತಮ್ಮ ಗೆಳೆಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಆಜಾದ್ ಕೇವಲ ತಮ್ಮ ಪಕ್ಷದ ಕುರಿತು ಮಾತ್ರವಲ್ಲ, ಬದಲಿಗೆ ದೇಶದ ಕುರಿತೂ ಚಿಂತಿಸುವ ಸಜ್ಜನ ರಾಜಕಾರಣಿ. ಈ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ದೇಶಕ್ಕಾಗಿ ಸಲ್ಲಿಸಿರುವ ಕೊಡುಗೆ ಮರೆಯುವುದಿಲ್ಲ ಎಂದು ಮೋದಿ ಭಾವುಕರಾಗಿ ನುಡಿದರು. ಆಜಾದ್ ಮತ್ತೆ ರಾಜ್ಯಸಭಾ ಸಂಸದರಾಗಿ ಈ ಸದನ ಪ್ರವೇಶಿಸಬೇಕು ಎಂಬುದು ತಮ್ಮ ವೈಯಕ್ತಿಕ ಬಯಕೆ. ಅವರಂತ ಉತ್ತಮ ಸಂಸದೀಯ ಪಟು ಸದನದಲ್ಲಿ ಇರುವುದು ಅವಶ್ಯಕ ಎಂದರು. ಗುಲಾಂ ನಬಿ ಆಜಾದ್ ನನ್ನ ಆತ್ಮೀಯ ಗೆಳೆಯ- ಆಜಾದ್ ಮತ್ತೆ ಈ ಸದನದ ಸದಸ್ಯರಾಗಲಿ- ವಿಪಕ್ಷ ನಾಯಕರಿಗೆ ಮೋದಿ ಕಣ್ಣೀರಿನ ವಿದಾಯ ಹೇಳಿದರು.