Thursday, April 3, 2025

‘ಇಂದು ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್ ಮಂಡನೆ’

ಬೆಂಗಳೂರು: ಈ ಬಾರಿಯ 2021-22ರ ಸಾಲಿನ ಕೇಂದ್ರ ಬಜೆಟ್‌ ಮಂಡನೆಗೆ  ಕ್ಷಣ ಗಣನೆ ಆರಂಭವಾಗಿದೆ. ಕೊರೋನಾದಿಂದ ಪ್ರತಿ ಕ್ಷೇತ್ರಗಳು ಸವಾಲು ಎದುರಿಸುತ್ತಿದ್ದು, ಬಜೆಟ್​ನತ್ತ ಎಲ್ಲರ ಚಿತ್ತ ಎನ್ನುವಂತಾಗಿದೆ. ಜೊತೆಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಮಂಡಿಸಬೇಕಾಗಿದೆ.

ಈ ಬಾರಿ ಅನ್ನಾದತರಿಗೆ ಸಿಗುತ್ತಾ ಬಂಪರ್ ಕೊಡುಗೆ?

ಇಂದು ಕೇಂದ್ರದ ಬಜೆಟ್‌ ಗೆ ಸಂಬಂಧಿಸಿದ ಎಲ್ಲಾ ಸಿದ್ದತೆಗಳು ಬಹುತೇಕ ಅಂತಿಮವಾಗಿವೆ.  ಮಂಡನೆಯಾಗಲಿರುವ ಬಜೆಟ್ ನಲ್ಲಿ ಹಿಂದೆಂದೂ ಕಂಡರಿಯದ ಬಜೆಟ್ ಮಂಡಿಸುವುದಾಗಿ ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದರು. ಕೋವಿಡ್ ಬಿಕ್ಕಟ್ಟಿನ ನಂತರ ಹಳಿ ತಪ್ಪಿರುವ ದೇಶದ ಆರ್ಥಿಕತೆಯನ್ನು ಚೇತರಿಕೆ ಹಂತಕ್ಕೆ ಕೊಂಡೊಯ್ಯಲು ಕಠಿಣ ಸುಧಾರಣಾ ಕ್ರಮಗಳನ್ನು ಘೋಷಿಸುವ ಸುಳಿವು ನೀಡಿದ್ದಾರೆ. ಹೀಗಾಗಿ ಕೇಂದ್ರ ಹಣಕಾಸು ಸಚಿವರ ಈ ಭರವಸೆ ಆಕರ್ಷಕವಾಗಿದ್ರೂ, ಎಲ್ಲರ ಚಿತ್ತ ಕೇಂದ್ರ ಬಜೆಟ್​​ನತ್ತ ನೆಟ್ಟಿದೆ.

ಆರ್ಥಿಕ ಕುಸಿತ ಮೇಲೆತ್ತಲು ಕಳೆದ ವರ್ಷ ಮಾರ್ಚ್ ಅಂತ್ಯಕ್ಕೆ ಘೋಷಿಸಿದ ಲಾಕ್‌ಡೌನ್‌ ಬಳಿಕ ಆರ್ಥಿಕತೆಯಲ್ಲಿ ಸಂಭವಿಸಿದ ಮಹಾ ಕುಸಿತ ದೊಡ್ಡ ಸವಾಲಾಗಿದೆ. ಏಪ್ರಿಲ್‌-ಜೂನ್‌ನಲ್ಲಿ ಮೈನಸ್‌ ಶೇ.23.9 ಹಾಗೂ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಮೈನಸ್‌ ಶೇ.7.5ಕ್ಕೆ ಜಿಡಿಪಿ ಪತನವಾಗಿತ್ತು. ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಕಾರ, 2020-21ರ ಇಡೀ ಸಾಲಿನಲ್ಲಿ ಜಿಡಿಪಿ ಮೈನಸ್‌ ಶೇ.7.7ರಷ್ಟು ಕುಸಿಯಲಿದೆ ಅಂತಾ ಅಂದಾಜಿಸಲಾಗಿದೆ.

ತೆರಿಗೆದಾರರಿಗೆ ಮತ್ತಷ್ಟು ಭಾರ ಹೊರಿಸಲು ಕೇಂದ್ರದ ಚಿಂತನೆ?

ಕೇಂದ್ರ ಸರ್ಕಾರ ಮಾತ್ರ, ಆರ್ಥಿಕತೆಯ ಬೆಳವಣಿಗೆಗೆ ಪುಷ್ಟಿ ನೀಡುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಣದ ಕೊರತೆ ಬಗ್ಗೆ ಚಿಂತಿಸಬಾರದು ಎಂಬ ನಿರ್ಧಾರ ತೆಗೆದುಕೊಂಡಿದೆ. ಮತ್ತೊಂದು ಕಡೆ ಸಂಕಷ್ಟದಲ್ಲಿರುವ ಜನತೆಯ ಮೇಲೆ ಹೊಸ ತೆರಿಗೆ-ಮೇಲ್ತೆರಿಗೆಯನ್ನು ವಿಧಿಸುವ ಚಿಂತನೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಮಧ್ಯಮ ವರ್ಗದ ಜನತೆಗೆ ಉಳಿತಾಯ, ಹೆಲ್ತ್‌ ಕೇರ್‌ ಮತ್ತು ಗೃಹ ನಿರ್ಮಾಣಕ್ಕೆ ಕೆಲ ಅನುಕೂಲ ಕಲ್ಪಿಸುವ ಸಾಧ್ಯತೆಯಿದೆ. ತೆರಿಗೆ ದರದ ಶ್ರೇಣಿಯನ್ನು ಪರಿಷ್ಕರಿಸುವ ಬದಲಿಗೆ ಮನೆ ಖರೀದಿ, ನಿರ್ಮಾಣಕ್ಕೆ ತೆರಿಗೆ ರಿಯಾಯಿತಿ ಹೆಚ್ಚಿಸಬಹುದು.

ದೇಶದಲ್ಲಿನ ನಿರುದ್ಯೋಗದ ಪ್ರಮಾಣ 2020ರ ನವೆಂಬರ್‌ ವೇಳೆಗೆ ಶೇ.6.51ರಷ್ಟಿದೆ ಎಂದು ಖಾಸಗಿ ಸಂಸ್ಥೆ, ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ, ತನ್ನ ಅಧ್ಯಯನದ ಮೂಲಕ ಕೇಂದ್ರಕ್ಕೆ ತಿಳಿಸಿದೆ. ದೇಶದ ಯುವಕರ ಉದ್ಯೋಗ ಸಮಸ್ಯೆ ನಿವಾರಣೆ ಬಗ್ಗೆ ಹೆಚ್ಚಿನ ಆದ್ಯತೆಯನ್ನು ಈ ಸಲದ ಬಜೆಟ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

ಖಾಸಗೀಕರಣದತ್ತ ಈ ಸಲದ ಬಜೆಟ್‌ನಲ್ಲಿ ಒಲವು ಕೇಂದ್ರ ಬಜೆಟ್‌ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸರಣಿ ಸಭೆಯಲ್ಲಿ, ಪ್ರಮುಖ ಆರ್ಥಿಕ ತಜ್ಞರು ಖಾಸಗೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಒತ್ತಾಯಿಸಿದ್ದಾರೆ. ಬಂಡವಾಳ ಹಿಂತೆಗೆತಕ್ಕೆ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಬೇಕೆಂದೂ ಸಲಹೆ ನೀಡಿದ್ದಾರೆ. ಈಗಾಗಲೇ ಏರ್‌ ಇಂಡಿಯಾದಲ್ಲಿ ಬಂಡವಾಳ ಹಿಂತೆಗೆತ ಪೂರ್ಣವಾಗಿದೆ. ಕೋವಿಡ್‌ ನಂತರ ಉದ್ಬವಿಸಿರುವ ಆರ್ಥಿಕತೆಗೆ ಚೈತನ್ಯ ನೀಡಲು ಖಾಸಗೀಕರಣದ ಮಾದರಿ ನಿರ್ಣಯದ ಜೊತೆಗೆ ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಕಾರ್ಮಿಕ ಕಾನೂನುಗಳ ಸುಧಾರಣೆಯಿಂದ ಬಂಡವಾಳ ಆಕರ್ಷಣೆ ಸುಲಲಿತ ಅಂತಾ ಸಲಹೆ ನೀಡಲಾಗಿದೆ.

ಆತ್ಮ ನಿರ್ಭರ್ ಭಾರತದ ಸ್ವಾವಲಂಬಿ ಯೋಜನೆಗೆ ಈ ಸಲದ ಬಜೆಟ್‌ ಹೆಚ್ಚಿನ ಆದ್ಯತೆ ನೀಡಲಿದೆ. ಜಾಗತಿಕವಾಗಿ ಭಾರತ ಬಲಿಷ್ಠವಾಗಬೇಕಾದ್ರೆ ಪೂರೈಕೆಯೂ ಹೆಚ್ಚಾಗಬೇಕು. ರಫ್ತು ಸಲಕರಣೆಗಳ ಮೇಲೆ ಸುಂಕ ಕಡಿಮೆ ಮಾಡಿ ಆಮದು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಜಾಗತಿಕ ಪೂರೈಕೆ ಸರಣಿಯ ಭಾಗವಾಗಿ ಭಾರತ ಹೊರಹೊಮ್ಮಲು ಪೂರಕವಾಗಿ ಸಹಾಯವಾಗಲಿದೆ ಅಂತಾ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಸಲದ ಕೇಂದ್ರ ಬಜೆಟ್‌ ಜತೆಗೆ 15ನೇ ಹಣಕಾಸು ಆಯೋಗದ ಶಿಫಾರಸುಗಳ ಮಂಡನೆಯೂ ಆಗಲಿದೆ. ಮುಂಬರುವ 2021-22ರಿಂದ 2025-26ರ ಅವಧಿಗೆ ಕೇಂದ್ರೀಯ ತೆರಿಗೆಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುವುದರ ಗುರಿಯಿದೆ. ವಿತ್ತೀಯ ಕೊರತೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯೋಗದ ವರದಿಯ ಸಲಹೆಗಳು ನಿರ್ಣಾಯಕವಾಗಲಿದೆ. ಆಯೋಗದ ಈ ಹಿಂದಿನ ವರದಿಯ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಕೇಂದ್ರೀಯ ತೆರಿಗೆಗಳಲ್ಲಿ 41 ಪರ್ಸೆಂಟ್‌ ರಾಜ್ಯಗಳ ಪಾಲಾಗಿದೆ. ಆದ್ರೆ, ಹೊಸ ವರದಿಯಲ್ಲಿ ಆಯೋಗ ಏನು ಹೇಳುತ್ತದೆ ಅನ್ನೋದು ರಾಜ್ಯಗಳಿಗೆ ಕುತೂಹಲ ಮೂಡಿಸಿದೆ.

ಕೋವಿಡ್‌-19 ನಂತರದ ಮೊದಲ ಬಜೆಟ್‌ ಬಗ್ಗೆ ಪ್ರತಿಯೊಬ್ಬರ ನಿರೀಕ್ಷೆ ಹೆಚ್ಚಿದೆ. ಆರೋಗ್ಯ, ನೈರ್ಮಲ್ಯ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನೀರಾವರಿ, ಮೂಲಸೌಕರ್ಯ, ಶಿಕ್ಷಣ ವಲಯಕ್ಕೆ ಸರಕಾರ ಬಜೆಟ್‌ ಮೂಲಕ ಹೆಚ್ಚಿನ ಅನುದಾನ ನೀಡಬಹುದು ಅಂತಾ ಊಹಿಸಲಾಗಿದೆ. ಕೊವಿಡ್‌ ಲಸಿಕೆ ವಿತರಣೆಗೂ ದೊಡ್ಡ ಪ್ರಮಾಣದ ಹಣಕಾಸು ನೆರವಿನ ಅಗತ್ಯವಿದೆ. ಸಾರ್ವಜನಿಕ ಬ್ಯಾಂಕ್‌ಗಳಿಗೆ ಮತ್ತು ಕೆಲ ಸಾರ್ವಜನಿಕ ಸಂಸ್ಥೆಗಳಿಗೆ ಬಂಡವಾಳ ನೆರವನ್ನೂ ಸರಕಾರ ನಿರೀಕ್ಷಿಸುತ್ತಿದೆ. ತೆರಿಗೆಗೆ ಸಂಬಂಧಿಸಿ ಬಜೆಟ್‌ನಲ್ಲಿ ಹೆಚ್ಚಿನ ಅವಕಾಶ ಇಲ್ಲದ ಕಾರಣ, ಆದ್ಯತೆ ಅನುಸಾರ ಅನುದಾನ ಮಂಜೂರು ಮಾಡುವ ನಿರೀಕ್ಷೆಯಿದೆ.

ಬಜೆಟ್​​ನಲ್ಲಿ ಅನ್ನದಾತರಿಗೆ ಬಂಪರ್ ಕೊಡುಗೆಯ ನಿರೀಕ್ಷೆ

ಕಳೆದ 67 ದಿನಗಳಿಂದ ದೆಹಲಿಯ ಗಡಿಯಲ್ಲಿ ದೇಶದ ಅನ್ನದಾತರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸ್ತಿದ್ದಾರೆ. ಕೇಂದ್ರ ಸರ್ಕಾರದ ಮಾತುಕತೆ ಪದೇ ಪದೇ ವಿಫಲವಾಗಿದೆ. ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡುವ ಮೂಲಕ ರೈತರ ಹಿತ ಕಾಯಲು ಮುಂದಾಗಿದೆ. ಈ ಸಲದ ಬಜೆಟ್‌ನಲ್ಲಿ ರೈತರ ಆದಾಯ ದ್ವಿಗುಣಕ್ಕೆ ಒತ್ತು, ಕೃಷಿ ಸಾಲ ವಿತರಣೆ ಗುರಿ 19 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಲು ಚಿಂತಿಸಲಾಗಿದೆ. 2020ರ ಬಜೆಟ್‌ನಲ್ಲಿ 15 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಣೆಯ ಗುರಿ ನಿಗದಿಪಡಿಸಿದ್ದ ಸರಕಾರ ಈ ಸಲ ರೈತರ ಆದಾಯವನ್ನು ದ್ವಿಗುಣಗೊಳಿಸುವ ಚಿಂತನೆ ಕೇಂದ್ರದ್ದಾಗಿದೆ.

ಕೃಷಿಕರಿಗೆ ನೇರವಾಗಿ ನಗದು ವಿತರಣೆಯನ್ನು ಮುಂದುವರಿಸುವುದರ ಜೊತೆಗೆ, ಕೃಷಿ ಸಾಲ ವಿತರಣೆಯ ಗುರಿಯನ್ನು 19 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆಯಿದೆ. 15 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಣೆಯ ಗುರಿಯನ್ನು 2020ರ ಬಜೆಟ್‌ನಲ್ಲಿನಿಗದಿ ಮಾಡಲಾಗಿತ್ತು. ಈ ವರ್ಷ ಸಾಲ ವಿತರಣೆಯ ಗುರಿಯನ್ನು 4 ಲಕ್ಷ ಕೋಟಿ ರೂ. ಹೆಚ್ಚಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೃಷಿ ವಲಯದಲ್ಲಿ ಬಂಡವಾಳದ ಕೊರತೆ ರೈತರಿಗೆ ಎದುರಾಗ್ತಿದೆ. ಮದ್ಯ ವರ್ತಿಗಳ ಹಾವಳಿ ತಪ್ಪಿಸಲು ಕೃಷಿ ಸಾಲವನ್ನು ಸರಕಾರ ಪದೇ ಪದೇ ವಿಸ್ತರಿಸುತ್ತಾ ಬಂದಿದೆ. ಬ್ಯಾಂಕ್‌ ಗಳು ಮತ್ತಯ ನಾನಾ ಹಣಕಾಸು ಸಂಸ್ಥೆಗಳಿಂದ ರೈತರಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ.

ಒಟ್ಟಿನಲ್ಲಿ ಶ್ರೀಮಂತರ ಆದಾಯದ ಮೇಲೆ ತಾತ್ಕಾಲಿಕವಾಗಿ ಕೋವಿಡ್‌ ಸೆಸ್‌ ವಿಧಿಸಲಿದ್ದಾರೆಯೇ ಅಥವಾ 2015ರಲ್ಲಿರದ್ದಾಗಿದ್ದ ವೆಲ್ತ್‌ ಟ್ಯಾಕ್ಸ್‌ ಅನ್ನು ಮತ್ತೆ ಪರಿಚಯಿಸಲಿದ್ದಾರೆಯೇ? ಯಾವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಘೋಷಣೆಯಾಗಲಿದೆ? ನೇರ ನಗದು ವರ್ಗಾವಣೆ ಮಿತಿ ಹೆಚ್ಚಲಿದೆಯೇ? ಮಧ್ಯಮ ವರ್ಗದ ತೆರಿಗೆದಾರರಿಗೆ ಮತ್ತು ಜನ ಸಾಮಾನ್ಯರಿಗೆ ಏನೇನು ಸಿಗಲಿದೆ ಎಂಬುದು ಕುತೂಹಲವಿದೆ. ಜೊತೆಗೆ ಕಾರ್ಪೊರೇಟ್‌, ಸಣ್ಣ ಮತ್ತು ಮಧ್ಯಮ ಉದ್ದಿಮೆ ವಲಯದಲ್ಲೂ ಬಾರೀ ಲೆಕ್ಕಾಚಾರಗಳನ್ನು ಹಾಕಲಾಗಿದ್ದು, ಎಲ್ಲರ ಚಿತ್ತ ಬಜೆಟ್​​​ನತ್ತ ಎನ್ನುವಂತಾಗಿದೆ.

RELATED ARTICLES

Related Articles

TRENDING ARTICLES