ಶಿವಮೊಗ್ಗ: ಜಿ.ಪಂ. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಚರ್ಚೆ ವೇಳೆ ಕೆಲವು ಕಾಮಿಡಿ ಘಟನೆಗಳು ನಡೆದವು. ಭದ್ರಾವತಿಯಲ್ಲಿ ಶಾಲೆ ದುರಸ್ತಿಗೆ ನಿಮ್ಮ ಮೂರನೇ ಕಣ್ಣು ಬಿಡಿ ಎಂದು ಶಾಸಕ ಸಂಗಮೇಶ್, ಸಚಿವ ಈಶ್ವರಪ್ಪ ಅವರಿಗೆ ಕಾಮಿಡಿಯಾಗಿ ಹೇಳಿದ್ರು. ಈ ವೇಳೆ ನನ್ನ ಮೂರನೇ ಕಣ್ಣು ಬಿಟ್ಟರೆ, ನೀನು ಸುಟ್ಟು ಹೋಗುತ್ತಿಯಾ ಎಂದು ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ರು.ಅಭಿವೃದ್ಧಿ ವಿಚಾರ ಬಂದಾಗ ನಾನು ಸುಟ್ಟು ಹೋದರೂ ಪರವಾಗಿಲ್ಲ.ನನಗೆ ಅಭಿವೃದ್ಧಿ ಮುಖ್ಯ ಎಂದು ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಕೂಡ ತಿರುಗೇಟು ನೀಡಿದ್ರು. ಜ. 24 ರಂದು ನಾನು ನಿಮ್ಮ ಊರಿಗೆ ಬರ್ತಿನಿ.ಕುಡಿಯುವ ನೀರು, ಶಾಲೆ ಸೇರಿದಂತೆ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡೋಣ ಅಂತಾ ಈಶ್ವರಪ್ಪ ಹೇಳಿದರೂ ಕೂಡ, ಸಂಗಮೇಶ್ ಸುಮ್ಮನಾಗಿಲ್ಲ. ನಾನು ನಿಮ್ಮ ಮನೆಗೆ ಬಂದಿದ್ದೆನೆ.ಯಾರಾದರೂ ಸಚಿವರು ನಿಮ್ಮನೆಗೆ ಬಂದಿದ್ದಾರಾ ಹೇಳು.ನೀನು ಯಾವಾಗ ಕಾಂಗ್ರೆಸ್ ಪಕ್ಷ ಬಿಟ್ಟು ಬರ್ತಿಯಾ ನನಗೆ ಗೊತ್ತಿದೆ. ಅಂತಾ ಈಶ್ವರಪ್ಪ ನಗೆ ಚಟಾಕಿ ಹಾರಿಸಿದರು.
ಇದಕ್ಕೂ ಮುನ್ನ ಕೆಡಿಪಿ ಸಭೆಗೆ ತಡವಾಗಿ ಆಗಮಿಸಿದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ಗೆ ಆಗಲೂ ಸಭೆಯಲ್ಲಿ ಕಿಚಾಯಿಸಿದ್ರು. ಸಭೆಗೆ ತಡವಾಗಿ ಬಂದರೆ, ಮುಂದಿನ ಬಾರಿ ಕಾಂಗ್ರೆಸ್ನ ಬಿ ಫಾರಂ ಸಿಗುವುದಿಲ್ಲ ಎಂದು ಸಂಗಮೇಶ್ವರ್ ಲೇಟಾಗಿ ಆಗಮಿಸಿದ್ದನ್ನು ಗಮನಿಸಿ, ಈಶ್ವರಪ್ಪ ಕಾಲೆಳೆದರು. ಈ ವೇಳೆ ನನಗೆ ಯಾವುದೇ ಪಕ್ಷ ಬೇಕಿಲ್ಲ. ಭದ್ರಾವತಿ ಜನರೇ ನನಗೆ ಪಕ್ಷ. ಜನರೇ ನನಗೆ ಗೆಲ್ಲಿಸುವವರು ಎಂದು ಸಂಗಮೇಶ್ ತಿರುಗೇಟು ನೀಡಿದ್ರು. ಈ ವೇಳೆ ಸಭೆಯಲ್ಲಿ ನಗೆ ಹೊನಲು ತೇಲಿ ಬಂತು. ನಿನ್ನ ಹೇಳಿಕೆ ರೆಕಾರ್ಡ್ ಆಗುತ್ತಿದೆ. ನಾನು ಈ ವಿಚಾರ ಸಿದ್ಧರಾಮಯ್ಯ, ನಿಮ್ಮ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪಕ್ಷಕ್ಕೆ ತಿಳಿಸುತ್ತೆನೆ. ಎಂದು ಸಚಿವ ಈಶ್ವರಪ್ಪ ಹೇಳುತ್ತಿದ್ದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಇದಕ್ಕೆ ಸಾತ್ ಕೊಟ್ರು. ನಿನಗೆ ನಮ್ಮ ಪಕ್ಷಕ್ಕಂತೂ ಕರೆಯೋದಿಲ್ಲ ಅಂತಾ ಸಚಿವ ಈಶ್ವರಪ್ಪ ಹೇಳುತ್ತಿದ್ದಂತೆ, ನಾನೇನು ಬರ್ತ್ತೀನಿ ಅಂತೇನು ಹೇಳಿಲ್ಲ ಅಂತಾ ಸಂಗಮೇಶ್ವರ್ ಹೇಳುತ್ತಿದ್ದಂತೆ, ಅಧಿಕಾರಿಗಳು ಹಾಗೂ ಇತರೆ ಜನಪ್ರತಿನಿಧಿಗಳು ನಗೆ ಬೀರಿದ್ರು.