ಶಿವಮೊಗ್ಗ: ಹೊಸ ವರ್ಷಾಚರಣೆಗೆ ಸರ್ಕಾರ ನಿಷೇಧ ಹೇರಿರುವುದು ಖಂಡನೀಯ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯುವ ಪೀಳಿಗೆಯ ಸಂಭ್ರಮಾಚರಣೆಗೆ, ಕಡಿವಾಣ ಹಾಕುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದಿದ್ದಾರೆ. ಆರ್.ಎಸ್.ಎಸ್. ಪ್ರೇರಿತ ಸಿದ್ಧಾಂತಗಳನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದು, ಇದರ ಭಾಗವಾಗಿ ಕ್ರಿಸ್ಮಸ್ ಆಚರಣೆಗೆ ಗುಂಪು ಗೂಡುವುದನ್ನು ನಿಷೇಧಿಸಿತು ಎಂದು ಟೀಕಿಸಿದ್ದಾರೆ. ಅದರಂತೆ, ಇದೀಗ ಯುವಕರ ಹೊಸ ವರ್ಷಾಚರಣೆಗೆ ಕಡಿವಾಣ ಹಾಕುತ್ತಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲವಾಗಿದೆ.
ಆರ್ ಆರ್ ನಗರ ಉಪ ಚುನಾವಣೆ ವೇಳೆಯಲ್ಲಿ 20 ಸಾವಿರ ಜನರ ಸೇರಿಸಿ ಸಭೆ, ಮೆರವಣಿಗೆ ಮಾಡಿದರು. ಆಗ ಸರ್ಕಾರಕ್ಕೆ ಕೊರೋನಾ ನೆನಪು ಇರಲಿಲ್ಲವೇ ಎಂದು ಬೇಳೂರು ಪ್ರಶ್ನೇ ಮಾಡಿದ್ದಾರೆ. ಯಾರಿಗೂ ಹೇಳದೆ, ಕೇಳದೇ ರಾತ್ರಿ ಕರ್ಫ್ಯೂ ಜಾರಿಗೊಳಿಸಿದರು. ಆದರೆ, ಮರುದಿನವೇ ಅದನ್ನು ಹಿಂತೆಗೆದುಕೊಳ್ಳುವ ಕೆಲಸ ಮಾಡಿದರು. ಇವರೇನು ತಜ್ಱರಾ ಅಂತಾ ಪ್ರಶ್ನೇ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ರಾಜ್ಯದಲ್ಲಿ, ಸಂಕ್ರಮಣದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿಯೇ ಅವರಿಗೆ ಕೊನೆ. ನಾನು ಜೋತಿಷ್ಯ ಹೇಳುತ್ತಿಲ್ಲ ಆದರೆ, ನನ್ನ ಮಾತು ಸತ್ಯವಾಗಲಿದೆ ಎಂದು ಬೇಳೂರು ಗೋಪಾಲಕೃಷ್ಣ, ಹೇಳಿದ್ದಾರೆ. ಇನ್ನೂ, ಸಿಗಂದೂರು ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಯಡಿಯೂರಪ್ಪರಿಗೆ ದೇವಿಯ ಶಾಪ ತಟ್ಟಿದೆ. ಇದಕ್ಕಾಗಿ ಡಿ ನೋಟಿಫಿಕೇಷನ್ ಪ್ರಕರಣ ಹೆಗಲೇರಿದೆ. ಹೀಗಾಗಿ ನಾನು ಅವರ ರಾಜೀನಾಮೆ ಕೇಳುವುದಿಲ್ಲ. ಅವರ ಪಕ್ಷದವರೇ ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿದ್ದಾರೆ. ಜನವರಿ 16ರ ನಂತರ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಸಂಕ್ರಮಣದ ಬಳಿಕ ಹೊಸ ರಾಜಕೀಯ ತಿರುವು ಆಗಲಿದೆ. ನಾನು ಯಾವುದೇ ಭ್ರಷ್ಟಾಚಾರದ ಆಪಾದಿತರನ್ನು ನಾನು ಇಟ್ಟುಕೊಳ್ಳುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ 15 ರಿಂದ 20 ಸಾವಿರ ಹಣ ನೀಡಿ ಮತ ಖರೀದಿಸಿದೆ. ಭ್ರಷ್ಟಾಚಾರದ ಹಣದ ಹೊಳೆಯನ್ನೇ ಯಡಿಯೂರಪ್ಪ ಸರ್ಕಾರ ಈ ಬಾರಿಯ ಚುನಾವಣೆಯಲ್ಲಿ ಹರಿಸಿದೆ. ಈ ಬಗ್ಗೆ ಪ್ರಧಾನಿ ಮೋದಿಯವರು ಗಮನಿಸಬೇಕು ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.