ಶಿವಮೊಗ್ಗ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ರಾಜಕೀಯವಾದ ಒಂದು ಷಡ್ಯಂತ್ರವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ, ಕಾಂಗ್ರೆಸ್ ಪ್ರೇರಿತ ಹೋರಾಟ ಎಂದು ತೆಗಳಿದ್ದಾರೆ. ಇದು ಬಹಳ ದಿನ ನಡೆಯೊಲ್ಲ ಎಂದಿದ್ದಾರೆ. ಇಡೀ ದೇಶದ ರೈತರು, ಅವರು ಬೆಳೆದ ಬೆಳೆ ಮಾರಾಟ ಮಾಡಲು, ಯಾರಪ್ಪನ ಅಪ್ಪಣೆ ಬೇಕು ಎಂದು ಪ್ರಶ್ನಿಸಿದ್ದಾರೆ. ರೈತ ಬೆಳೆದ ಬೆಳೆ ಎಲ್ಲಿ ಬೇಕಾದರೂ ಹೋಗಿ ಮಾರಾಟ ಮಾಡಲಿ. ಒಬ್ಬ ಪೆನ್ ಉತ್ಪಾದನೆ ಮಾಡುವವನು ಕೂಡ, ಇಡೀ ದೇಶದಲ್ಲಿ ಎಲ್ಲಿಯಾದರೂ ಹೋಗಿ ಮಾರಾಟ ಮಾಡುತ್ತಾನೆ. ಆದರೆ, ರೈತರ ಬೆಳೆ ಮಾರಾಟಕ್ಕೆ ದಲ್ಲಾಳಿ ಇರುತ್ತಾನೆ. ರೈತರು ಬೆಳೆದ ಬೆಳೆ ಮಾರಾಟ ಮಾಡಲು, ದಲ್ಲಾಳಿ ಏಕೆ ಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ರಾಜ್ಯದ, ದೇಶದ ರೈತರು ಈ ಕಾಯ್ದೆಯನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದಾರೆ. ಕುತಂತ್ರದ ರಾಜಕಾರಣಿಗಳು ರೈತರನ್ನು ಎತ್ತಿಕಟ್ಟುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆಪಾದಿಸಿದ್ದಾರೆ.