ಶಿವಮೊಗ್ಗ: ಜ. 2 ಮತ್ತು 3 ರಂದು, ರಾಜ್ಯ ಬಿಜೆಪಿ ವಿಶೇಷ ಸಭೆ ಮತ್ತು ಕಾರ್ಯಕಾರಿಣಿ ಸಭೆ ಶಿವಮೊಗ್ಗದಲ್ಲಿ ನಡೆಯುತಲಿದ್ದು, ಅಂದು, ಶಿವಮೊಗ್ಗಕ್ಕೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಳ್ಳುವಂತೆ, ಪೌರ ಕಾರ್ಮಿಕರಿಗೆ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.
ಇಂದು ಅಟಲ್ ಬಿಹಾರಿ ವಾಜಪೇಯಿ ಜನುಮದಿನದ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡ ಸಚಿವ ಈಶ್ವರಪ್ಪ, ಶಿವಮೊಗ್ಗ ಕ್ಲೀನಾಗಿ ಇಟ್ಟಿದ್ದಾರೆ ಎಂದರೆ, ನಿಮಗೂ ಒಳ್ಳೆ ಹೆಸರು ಬರುತ್ತದೆ. ನನಗೂ ಒಳ್ಳೆ ಹೆಸರು ಬರುತ್ತದೆ ಎಂದರು. ಸ್ಮಾರ್ಟ್ ಸಿಟಿ ಅಡಿಯಲ್ಲಿ ಅನೇಕ ಕಾಮಗಾರಿಗಳು ನಗರದಲ್ಲಿ ನಡೆಯುತ್ತಿವೆ. ಆದರೂ, ಶಿವಮೊಗ್ಗ ಸ್ವಚ್ಛವಾಗಿ, ಶುಭ್ರವಾಗಿರಬೇಕು. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು, ಮತ್ತಷ್ಟು ನಗರವನ್ನು ಸ್ವಚ್ಛವಾಗಿಸಿದರೆ, ಶಿವಮೊಗ್ಗಕ್ಕಾಗಮಿಸಿದ ಅತಿಥಿಗಳಿಗೆ ಶಿವಮೊಗ್ಗ ಮತ್ತಷ್ಟು ಇಷ್ಟವಾಗಲಿದೆ ಎಂದು ಹೇಳಿದರು.
ಈ ವೇಳೆ ಪೌರ ಕಾರ್ಮಿಕರನ್ನು, ನೆಲದ ಮೇಲೆ ಕೂರಿಸಿ, ಈ ರೀತಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಪಾಲಿಕೆ ವಿರುದ್ಧ ಜನರ ಅಪಸ್ವರ ಕೇಳಿ ಬಂದಿದೆ. ಪೌರ ಕಾರ್ಮಿಕರೆಂದರೆ, ಅಸಡ್ಡೆ, ಅಸಹನೆ ತೋರುವ ವರ್ತನೆ ಇದಾಗಿದೆ ಎಂದು ನೆಟ್ಟಿಗರು ಮತ್ತು ವಿಚಾರವಾದಿಗಳು ಖಂಡಿಸಿದ್ದಾರೆ. ಅಲ್ಲದೇ, ಪೌರ ಕಾರ್ಮಿಕರ ಬಳಿ ಇಡೀ ಶಿವಮೊಗ್ಗ ಸ್ವಚ್ಛವಾಗಿರಿಸಿಕೊಳ್ಳಲು ಮನವಿ ಮಾಡಿಕೊಳ್ಳುವ ಪಾಲಿಕೆ ಅಧಿಕಾರಿಗಳು, ಸೌಜನ್ಯಕ್ಕಾಗಿಯಾದರೂ ಚೇರುಗಳ ವ್ಯವಸ್ಥೆ ಮಾಡಬಹುದಿತ್ತು ಎಂದು ಆಕ್ರೋಶ ಹೊರ ಹಾಕಿದ್ದಾರೆ.