ಕಲಬುರಗಿ: ಭೀಮಾ ನದಿ ತೀರದ ಕಲಬುರಗಿಯ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮ ಪಂಚಾಯಿತಿ ಚುನಾವಣೆಗೆ ದಂಪತಿ ಸ್ಪರ್ಧೆಗಿಳಿದಿದ್ದು, ಮತ ನೀಡಿ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಪತಿ ಅರವಿಂದ ದೊಡ್ಡಮನಿ ಎಂಬುವರು ಸತತ 6 ಬಾರಿ ಆಯ್ಕೆಯಾಗಿ 7ನೇ ಸಲ ಪುನರಾಯ್ಕೆ ಬಯಸಿ 4ನೇ ವಾರ್ಡ್‌ನಲ್ಲಿ ಕಣಕ್ಕಿಳಿದಿದ್ದಾರೆ. ಇವರ ಪತ್ನಿ ಗಂಗೂಬಾಯಿ ವಾರ್ಡ್ ಸಂಖ್ಯೆ 3 ರಿಂದ ಮೊದಲ ಬಾರಿಗೆ ಅಖಾಡಕ್ಕಿಳಿದಿದ್ದಾರೆ. ಆರು ಬಾರಿ ಗೆಲುವು ಸಾಧಿಸಿ ನಮ್ಮ ಯಜಮಾನರು ಸೇವೆ ಸಲ್ಲಿಸುತ್ತಿದ್ದಾರೆ. ಈ ಬಾರಿ ಇಬ್ಬರೂ ಕಣದಲ್ಲಿದ್ದೇವೆ. ಜನರು ಮತದಾನ ಮಾಡುವ ಮೂಲಕ ಇಬ್ಬರನ್ನು ಗೆಲ್ಲಿಸಿದರೆ, ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಗಂಗೂಬಾಯಿಯವರು ಜನರಲ್ಲಿ ಮನವಿ ಮಾಡಿದರು.
ಇನ್ನೂ ಅಫಜಲಪುರ ತಾಲೂಕಿನಲ್ಲಿ 90 ಗ್ರಾಮಗಳಿವೆ. 28 ಗ್ರಾಮ ಪಂಚಾಯಿತಿಗಳಿಂದ ಸುಮಾರು 230 ಮತಗಟ್ಟೆಗಳಿವೆ. ಒಟ್ಟು 498 ಸದಸ್ಯರ ಸ್ಥಾನಗಳಿದ್ದು, 1,63,497 ಮತದಾರರಿದ್ದಾರೆ. 28 ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಬಳೂರ್ಗಿ ಗ್ರಾಮ ಪಂಚಾಯಿತಿ ಬಹಳ ಜಿದ್ದಾಜಿದ್ದಿನ ಕಣ ಎಂದು ಗುರುತಿಸಿಕೊಂಡಿದೆ. ಇಲ್ಲಿ 15 ಸ್ಥಾನಗಳಿದ್ದು, 41 ಜನ ಆಯ್ಕೆ ಬಯಸಿ ಕಣದಲ್ಲಿದ್ದಾರೆ.
ಅದೇನೇ ಇರಲಿ, ಕಳೆದ ಚುನಾವಣೆಗಿಂತ ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೊಸೆ-ಅತ್ತೆ, ಅಣ್ಣ-ತಂಗಿ, ಗಂಡ ಹೆಂಡತಿ ಹೀಗೆ ಪ್ರತಿಯೊಬ್ಬರು ಚುನಾವಣೆ ಅಖಾಡಕ್ಕೆ ಧುಮುಕುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ ಅಧಿಕಾರ ಮಾತ್ರ ಅನುಭವಿಸದೇ, ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂಬುವುದು ಜನರ ಆಶಯವಾಗಿದೆ.