ನಂಜನಗೂಡು: ತಮ್ಮ 23 ದಿನಗಳ ಹೋರಾಟಕ್ಕೆ ಪ್ರತಿಫಲ ಸಿಗದ ಹಿನ್ನಲೆ ಕೊನೆಗೂ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದಾರೆ. ತಾಲೂಕು ಆಡಳಿತ ಹಾಗೂ ಚುನಾವಣಾಧಿಕಾರಿಗಳ ಸಂಧಾನಕ್ಕೆ ಡೊಂಟ್ ಕೇರ್ ಗ್ರಾಮಸ್ಥರು ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದಾರೆ ಇದರಿಂದ ತಾಲೂಕು ಆಡಳಿತದ ಸಂಧಾನ ವಿಫಲವಾಗಿದೆ.
ಗ್ರಾಮಪಂಚಾಯ್ತಿ ಚುನಾವಣಾ ಬಹಿಷ್ಕಾರಿಸುವುದಾಗಿ ಎಚ್ಚರಿಕೆ ನೀಡಿದ್ದ ಗ್ರಾಮಸ್ಥರು ತಮ್ಮ ನಿರ್ಧಾರಕ್ಕೆ ಬದ್ದರಾಗಿದ್ದಾರೆ. ಏಷಿಯನ್ ಪೈಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ಭರವಸೆ ಈಡೇರದ ಹಿನ್ನಲೆ ಕಳೆದ 23 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಇಮ್ಮಾವು ಗ್ರಾಮಸ್ಥರು ಗ್ರಾಮಪಂಚಾಯ್ತಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಕಾರ್ಖಾನೆ ನಿರ್ಮಾಣಕ್ಕಾಗಿ ಭೂಮಿ ನೀಡಿದ ಕುಟುಂಬಸ್ಥರಿಗೆ ಏಷಿಯನ್ ಪೈಂಟ್ಸ್ ಉದ್ಯೋಗ ನೀಡುವ ಭರವಸೆ ನೀಡಿತ್ತು. ಭರವಸೆ ಈಡೇರದ ಹಿನ್ನಲೆ ಅನಿರ್ಧಿಷ್ಟಾವಧಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಇಮ್ಮಾವು ಗ್ರಾಮಸ್ಥರು ಸರ್ಕಾರದ ಕಣ್ಣು ತೆರೆಸುವ ಯತ್ನಕ್ಕೆ ಮುಂದಾಗಿದ್ದರು.
ಉದ್ಯೋಗ ಕಲ್ಪಿಸುವಂತೆ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿರಲಿಲ್ಲ. ಈ ಹಿನ್ನಲೆ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಗ್ರಾಮಪಂಚಾಯ್ತಿ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ನಿನ್ನೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಹಿನ್ನಲೆ ಯಾವೊಬ್ಬ ಆಕಾಂಕ್ಷಿಯೂ ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ.
ನಾಮಪತ್ರ ಸಲ್ಲಿಸುವಂತೆ ತಾಲೂಕು ಆಡಳಿತ ಹಾಗೂ ಪೊಲೀಸರು ಮನವಿ ಮಾಡಿ ಮನ ಒಲಿಸಲು ಯತ್ನಿಸಿದರು. ಚುನಾವಣಾಧಿಕಾರಿ ಸಹ ಸ್ಥಳಕ್ಕೆ ಬಂದು ನಿಗದಿತ ಸಮಯಕ್ಕಿಂತ 3೦ ನಿಮಿಷಗಳ ಹೆಚ್ಚಿನ ಅವಧಿ ನೀಡಿ ನಾಮಪತ್ರ ಸಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು. ಆದರೆ ಗ್ರಾಮಸ್ಥರು ಮಾತ್ರ ಪಟ್ಟು ಸಡಿಸಲಿಲ್ಲ. ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಇಮ್ಮಾವು ಗ್ರಾಮ ಇದುವರೆಗೂ 16 ವಾರ್ಡ್ ಗಳ ಪೈಕಿ 13 ವಾರ್ಡ್ ಗಳಿಗೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದೆ. ಇಮ್ಮಾವು ಗ್ರಾಮದ 3 ವಾರ್ಡ್ ಗಳಿಗೆ ನಾಮಪತ್ರ ಸಲ್ಲಿಸಲು ಯಾವೊಬ್ಬ ಅಭ್ಯರ್ಥಿಯೂ ಮುಂದೆ ಬರಲಿಲ್ಲ. ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರಿಂದ ಸಂಧಾನ ಯತ್ನ ವಿಫಲವಾಗಿದೆ.
ಜಿಲ್ಲಾಡಳಿತದ ಮನವಿಗೆ ಜಗ್ಗದ ಹಿಮ್ಮಾವು ಗ್ರಾಮಸ್ಥರು ಚುನಾವಣೆಯನ್ನ ಬಹಿಷ್ಕರಿಸುವ ಮೂಲಕ ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗವೇ ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ.