ಬೆಂಗಳೂರು : ಕರ್ನಾಟಕದ ಸಿಂಗಂ ಖ್ಯಾತಿಯ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರುತ್ತಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.
ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಚಿಕ್ಕಮಗಳೂರು ಎಸ್ ಪಿಯಾಗಿ, ಬೆಂಗಳೂರಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದರು. 2019ರ ಮೇ 28 ರಂದು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ತಮಿಳುನಾಡಿನವಾರದ ಅಣ್ಣಾಮಲೈ ತವರು ರಾಜ್ಯದಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಪಡೆಯುತ್ತಿದ್ದಾರೆ. 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಣ್ಣಾಮಲೈ ಬಿಜೆಪಿಯಿಂದ ಕಣಕ್ಕಳಿಯಲಿದ್ದಾರೆ.
ಇನ್ನು ಅಣ್ಣಾ ಮಲೈ ಬಿಜೆಪಿ ಸೇರ್ಪಡೆ ಬಗ್ಗೆ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. “ಕರ್ನಾಟಕ ಕೇಡರ್‌ನ ನಿವೃತ್ತಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಅವರಿಗೆ ಹೃದಯಪೂರ್ವಕ ಸ್ವಾಗತ’’ ಅಂತ ಸುಧಾಕರ್ ಟ್ವೀಟ್ ಮಾಡಿದ್ದಾರೆ.