ನವದೆಹಲಿ : ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಪಟ್ಟ ಬದಲಾವಣೆ ಕುರಿತಂತೆ ಮಹತ್ವದ ಸಭೆ ನಡೆಯುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಹೆಚ್ ಮುನಿಯಪ್ಪ ಭಾಗಿಯಾಗಿದ್ದಾರೆ. ಅಂತೆಯೇ ಸೋನಿಯಾ ಗಾಂಧಿ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದು, ಪಕ್ಷದ ಅಧ್ಯಕ್ಷರನ್ನು ಬದಲಿಸುವ ಪ್ರಕ್ರಿಯೆ ಆರಂಭಿಸಿ ಅಂತ ನಾಯಕರಲ್ಲಿ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷಕ್ಕೆ ಖಾಯಂ ಅಧ್ಯಕ್ಷರ ಅವಶ್ಯಕತೆಯಿದೆ. ಈ ಬಗ್ಗೆ ಅನೇಕ ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ತಾವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಇಚ್ಛಿಸಿರುವುದಾಗಿ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದು, ಹೊಸ ಸಾರಥಿ ಆಯ್ಕೆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.
ಎ.ಕೆ ಆಂಟೋನಿ ಸೇರಿದಂತೆ ಬಹುತೇಕ ನಾಯಕರು ಸೋನಿಯಾ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಡಾ. ಮನಮೋಜನ್ ಸಿಂಗ್ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನ ಬದಲಿಸೋದು ಸೂಕ್ತವಲ್ಲ ಅಂದಿದ್ದಾರೆ ಎನ್ನಲಾಗಿದೆ.
ರಾಹುಲ್ ಗರಂ : ಅಧ್ಯಕ್ಷ ಸ್ಥಾನ ಬದಲಿಸುವ ಕುರಿತು ಪಕ್ಷದ ಕೆಲವು ನಾಯಕರು ಬರೆದಿರುವ ಪತ್ರಕ್ಕೆ ರಾಹುಲ್ ಗಾಂಧಿ ಗರಂ ಆಗಿದ್ದಾರೆ. ಸೋನಿಯಾ ಗಾಂಧಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗಲೇ ಏಕೆ ಪತ್ರ ಬರೆಯಬೇಕಿತ್ತು ಅಂತ ಖಾರವಾಗಿ ಪ್ರಶ್ನಿಸಿದ್ದಾರೆ.