ಮಂಗಳೂರು: ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಿದ್ದ ಆರೋಪಿಗೆ ಪ್ರಚಾರ ಗಿಟ್ಟಿಸೋದಷ್ಟೆ ಉದ್ದೇಶವಾಗಿತ್ತು ಅನ್ನೋದು ವಿಚಾರಣೆ ವೇಳೆ ತಿಳಿದು ಬಂದಿದೆ ಅಂತಾ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿರುವ ತನ್ನ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಜನವರಿ ತಿಂಗಳಲ್ಲಿ ಬಾಂಬ್ ಇರಿಸಿ ಸುದ್ದಿಯಾಗಿದ್ದ ಆದಿತ್ಯ ರಾವ್ ನಂತೆಯೇ ತನಗೂ ಪ್ರಚಾರ ಸಿಗಬೇಕೆನ್ನುವ ದುರುದ್ದೇಶದಿಂದಲೇ ಬಂಧಿತ ಆರೋಪಿ ವಸಂತ ಶೇರಿಗಾರ್ ಕೃತ್ಯ ಎಸಗಿದ್ದಾನೆ. ಅತೀ ಹೆಚ್ಚು ಸಮಯ ಮೊಬೈಲ್ನಲ್ಲಿ ಕಾಲ ಕಳೆಯುತ್ತಿದ್ದ ಈತ ಗೂಗಲ್ ಸರ್ಚ್ ಇಂಜಿನ್ ಮೂಲಕ ನಿವೃತ್ತ ಏರ್ ಪೋರ್ಟ್ ನಿರ್ದೇಶಕರ ಮೊಬೈಲ್ ನಂಬರ್ಗೆ ಸಂಪರ್ಕಿಸಿ ಬೆದರಿಕೆ ಒಡ್ಡಿದ್ದಾನೆ. ಇದೊಂದು ದೇಶದ ಭದ್ರತೆಗೆ ಒಡ್ಡಿದ ಬೆದರಿಕೆ ಪ್ರಕರಣವಾದ್ದರಿಂದ ಇದನ್ನ ಗಂಭೀರವಾಗಿ ಪರಿಗಣಿಸಲಾಗಿದೆ. ಇದು ಇನ್ನಿತರರಿಗೆ ಪ್ರೇರಣೆ ನೀಡದಂತಾಗಲು ಬಂಧಿತ ಆರೋಪಿ ವಸಂತ ಶೇರಿಗಾರ್ (33) ವಿರುದ್ಧ ಗಂಭೀರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಈತನ ಮಾನಸಿಕ ಸ್ಥಿತಿ ಹಾಗೂ ಕೊರೋನಾ ಕುರಿತ ವರದಿ ಇನ್ನಷ್ಟೆ ಕೈ ಸೇರಬೇಕಿದೆ ಅಂತಾ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
-ಇರ್ಷಾದ್ ಕಿನ್ನಿಗೋಳಿ