ಕೋಲಾರ: ಜಿಲ್ಲೆಯಲ್ಲಿ ಕೊರೋನಾ ತನ್ನ ರಣಕೇಕೆಯನ್ನ ಮುಂದುವರೆಸಿದೆ. ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ, ಮುಜರಾಯಿ ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿಗೆ ಕೊರೋನಾ ಬಂದಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ವಿಷಮ ಶೀತ ಜ್ವರ ಕೊವಿಡ್ಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸೋಂಕಿತರಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆ ಜಾಸ್ತಿಯಾಗಿದೆ. ಸೋಂಕಿತ ಪ್ರಮಾಣ ಇಳಿಕೆಯಾಗುತ್ತಿದ್ದರೂ, ಜಿಲ್ಲೆಯಲ್ಲಿ ಇದೀಗ ವಿಷಮಶೀತ ಜ್ವರ ಅಪಾಯಕಾರಿಯಾಗಿದೆ. ಇದರಿಂದ ದಿನೇ ದಿನೇ ಸೋಂಕಿತರ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಿಂದ ವೈಯಕ್ತಿಕ ಕೆಲಸದ ನಿಮಿತ್ತ ಉಪವಿಭಾಗಾಧಿಕಾರಿ ಬೆಂಗಳೂರಿನಲ್ಲಿ ಇದ್ದರು. ಮೂರ್ನಾಲ್ಕು ದಿನಗಳಿಂದ ಕರ್ತವ್ಯಕ್ಕೆ ಮರಳಿದ್ದ ಅವ್ರಿಗೆ ಜ್ವರ ಕಾಣಿಸಿಕೊಂಡಿದೆ. ಕೂಡಲೆ ಕೊವಿಡ್ ತಪಾಸಣೆಗೆ ಒಳಗಾದಾಗ ಸೋಂಕು ತಗುಲಿರುವುದು ಖಚಿತವಾಗಿದೆ. ಜೊತೆಗೆ ತನ್ನ ಕಚೇರಿಯ ಸಿಬ್ಬಂದಿಗೂ ಸೋಂಕು ಬಂದಿದೆ.
ಜಿಲ್ಲಾಡಳಿತ ಭವನದ ಮುಜರಾಯಿ ತಹಸೀಲ್ದಾರ್, ಚುನಾವಣಾ ಶಾಖೆಯ ಸಿಬ್ಬಂದಿಗೂ ಕೊರೋನಾ ಬಂದಿರುವುದು ನೌಕರರ ವಲಯದಲ್ಲಿ ಆತಂಕಕ್ಕೆ ದೂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಿಬ್ಬಂದಿ, ಡಿಎಆರ್ ಸಿಬ್ಬಂದಿಗೆ ಸೋಂಕು ತಗುಲಿದೆ. ಆದ್ರೆ, ಇವರೆಲ್ಲರ ಸೋಂಕಿನ ಮೂಲ ಪತ್ತೆಯಾಗಿಲ್ಲ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 40 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಸೋಂಕಿತರ ಸಂಪರ್ಕವೂ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ.
-ಆರ್.ಶ್ರೀನಿವಾಸಮೂರ್ತಿ