ತುಮಕೂರು : ಕೊರೋನಾ ಸೋಂಕಿತರ ಮೃತದೇಹಗಳನ್ನು ಪಡೆಯಲು ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿಯನ್ನು ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ನಾಗೇಂದ್ರಪ್ಪ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಮೂರರಿಂದ ಆರು ಮಂದಿ ಸಾವನ್ನಪ್ಪುತ್ತಿದ್ದು ಈ ಹಿನ್ನೆಲೆಯಲ್ಲಿ ಸೋಂಕಿಗೆ ಹೆದರಿರುವ ಸಂಬಂಧಿಕರು ಕೊರೋನಾ ಸೋಂಕಿನಿಂದ ಮೃತಪಟ್ಟವರ ಮೃತ ದೇಹ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮೃತಪಟ್ಟವರ ಅಂತ್ಯಕ್ರಿಯೆ ಮಾಡಲು ಯಾವುದೇ ಭಯಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಅಂತ್ಯಕ್ರಿಯೆ ನಡೆಸುವ ನಾಲ್ವರಿಗೆ ಪಿಪಿಇ ಕಿಟ್ ಕೊಟ್ಟು, ಜೊತೆಗೆ ಒಬ್ಬರು ಮೇಲ್ವಿಚಾರಕರನ್ನು ಕಳಿಸಿಕೊಟ್ಟು ಯಾವುದೇ ತೊಂದರೆಯಾಗದಂತೆ ಅಂತ್ಯಕ್ರಿಯೆ ನಡೆಸುತ್ತಿದೆ. ಹಾಗಾಗಿ ಜನರು ಈ ಬಗ್ಗೆ ಜಾಗೃತರಾಗಿ ಸಾವನ್ನಪ್ಪಿದವರ ಮೃತದೇಹಗಳನ್ನು ಪಡೆದು ಅಂತ್ಯಕ್ರಿಯೆ ನಡೆಸಿ ಎಂದು ಡಿಹೆಚ್ಓ ನಾಗೇಂದ್ರಪ್ಪ ಮನವಿ ಮಾಡಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಇಪ್ಪತ್ತು ಮೃತ ದೇಹಗಳನ್ನು ಪಡೆಯಲು ಸಂಬಂಧಿಕರು ಹಿಂದೇಟು ಹಾಕಿದ್ದು ನಮ್ಮ ಗಮನಕ್ಕೆ ಬಂದಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಾವು ಎಚ್ಚರವಹಿಸುತ್ತೇವೆ ಎಂದರು.
ಹೇಮಂತ್ ಕುಮಾರ್ ಜೆ.ಎಸ್., ಪವರ್ ಟಿವಿ, ತುಮಕೂರು.