Friday, November 22, 2024

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಈಸೂರು ಎನ್.ಎಸ್. ಹುಚ್ರಾಯಪ್ಪ ವಿಧಿವಶ

ಶಿವಮೊಗ್ಗ: ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖಪಾತ್ರ ವಹಿಸಿದ್ದ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಈಸೂರಿನ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ(104) ಅವರು ಇಂದು ಈಸೂರಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಎನ್.ಎಸ್. ಹುಚ್ಚರಾಯಪ್ಪ, ಅವರಿಗೆ ಅಂದಿನ ಬ್ರಿಟೀಷ್ ಸರ್ಕಾರದ ಆದೇಶದಂತೆ, ಅಂದಿನ ಸಾಗರದ ನ್ಯಾಯಾಲಯವು, ಮರಣದಂಡನೆ ಘೋಷಿಸಿತ್ತು. ಆದರೆ, ಹುಚ್ಚುರಾಯಪ್ಪ ಅವರು, ಆಗ ಅಪ್ರಾಪ್ತ ವಯಸ್ಕರಾಗಿದ್ದರಿಂದಾಗಿ ಸರ್ಕಾರವು ಘೋಷಿಸಿದ್ದ ಮರಣದಂಡನೆಯನ್ನು ಬದಲಿಸಿ, ಶ್ರೇಷ್ಠ ನ್ಯಾಯಾಲಯವು, ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗಿನ ಮೈಸೂರು ಮಹಾರಾಜರ ಪುತ್ರಿ ಗಾಯಿತ್ರಿಯ ನಾಮಕರಣದ ಪ್ರಯುಕ್ತ 1946 ರ ಅಕ್ಟೋಬರ್ 21 ರಂದು ಹುಚ್ಚುರಾಯಪ್ಪ ಅವರಿಗೆ ಬಿಡುಗಡೆಯಾಗಿತ್ತು. ಅಂದಹಾಗೆ, ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು ಅಂದಿನ ಕಾಲದಲ್ಲಿ ಕಂದಾಯ ವಸೂಲಿ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಂದಾಯ ವಸೂಲಿ ವಿರುದ್ಧ ಪ್ರತಿಭಟನೆ ನಡೆಸಿ, ಸ್ವತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡ ದೇಶದ ಏಕೈಕ ಗ್ರಾಮ ಈಸೂರು. ಗ್ರಾಮಸ್ಥರು, ತಮ್ಮದೇ ಆದ ಸರ್ಕಾರವನ್ನು ರಚಿಸಿಕೊಂಡು ಆಡಳಿತ ನಡೆಸಲು ಹೋರಾಟ ನಡೆಸಿದವರಲ್ಲಿ ಪ್ರಮುಖಪಾತ್ರ ವಹಿಸಿದ್ದ ಅನೇಕರಲ್ಲಿ ಹುಚ್ಚರಾಯಪ್ಪ ಅವರೂ ಕೂಡ, ಒಬ್ಬರಾಗಿದ್ರು. ಸ್ವತಂತ್ರ ಹಳ್ಳಿ ಎಂದು ಘೋಷಿಸಿಕೊಂಡು ಆಡಳಿತ ನಡೆಸುತ್ತಿದ್ದ ಈಸೂರು ಗ್ರಾಮಸ್ಥರ ಮೇಲೆ ಬ್ರಿಟೀಷ್ ಸರ್ಕಾರ ಲಾಠಿ ಪ್ರಹಾರ ನಡೆಸಿತ್ತು. ಇದರಿಂದ ರೊಚ್ಚಿಗೆದ್ದ ಜನ ಅಮಲ್ದಾರ ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಂದುಹಾಕಿದ್ದರು. ಇದರಿಂದಾಗಿ ಹಳ್ಳಿಯವರು ಪೊಲೀಸರ ದೌರ್ಜನ್ಯಕ್ಕೆ ಒಳಗಾದರು. ಬ್ರಿಟೀಷ್ ಆಡಳಿತಗಾರರು 5 ಮಂದಿಯನ್ನು ಗಲ್ಲಿಗೇರಿಸಿ ಸೇಡು ತೀರಿಸಿಕೊಂಡಿದ್ದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದ ಹುಚ್ಚರಾಯಪ್ಪ ಅವರನ್ನು ದೇಶದ ಪ್ರಧಾನಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರು ತಾಮ್ರಪತ್ರ ನೀಡಿ ಗೌರವಿಸಿದ್ದರು. ಅಲ್ಲದೇ ಆಡಳಿತಾರೂಢ ಸರ್ಕಾರಗಳು ಹುಚ್ಚರಾಯಪ್ಪ ಅವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

RELATED ARTICLES

Related Articles

TRENDING ARTICLES