ಮಂಡ್ಯ : ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿ ಟೆಂಡರ್ ನಲ್ಲಿ ಬೃಹತ್ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸಿದ ಆಪ್ತ ಗುತ್ತಿಗೆದಾರರಿಗೆ ಸಚಿವರು ಕೋಟಿ ಕೋಟಿ ಅನುದಾನದ ಕಾಮಗಾರಿ ಗಿಫ್ಟ್ ಕೊಟ್ಟಿದ್ದಾರಂತೆ. ಕೋಟ್ಯಂತರ ರೂ. ಟೆಂಡರ್ ಗೋಲ್ಮಾಲ್ ಪ್ರಕರಣವೀಗ ಎಸಿಬಿ, ಲೋಕಾಯುಕ್ತದ ಮೆಟ್ಟಿಲೇರಿದೆ.
ಹೌದು! ಕಳೆದ ವರ್ಷ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಜೆಡಿಎಸ್ ನಿಂದ ಗೆದ್ದು ಶಾಸಕರಾಗಿದ್ದ ಕೆ.ಸಿ. ನಾರಾಯಣಗೌಡ ರಾಜಕೀಯ ಮೇಲಾಟದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ನಂತರ ನಡೆದ ಉಪ ಚುನಾವಣೆಯಲ್ಲಿ BJP ಯಿಂದ ಸ್ಪರ್ಧೆ ಮಾಡಿದ್ದ ಕೆ.ಸಿ.ನಾರಾಯಣಗೌಡ ಗೆದ್ದು ಶಾಸಕರಾಗಿದ್ದು ಅಲ್ದೆ ರಾಜ್ಯದ ಸಚಿವ ಸಂಪುಟದಲ್ಲಿ ಮಂತ್ರಿ ಕೂಡ ಆಗಿದ್ದಾರೆ.
ಆಶ್ರಯ ಕೊಟ್ಟವರು, ಗೆಲುವಿಗೆ ಸಹಕರಿಸಿದವರಿಗೆ ಮಂತ್ರಿಗಳ ನೆರವು?
ಪ್ರತಿಷ್ಠಿತ ಉಪ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ತನು, ಮನ, ಧನ ಸೇರಿದಂತೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದ್ದ ಆಪ್ತ ಗುತ್ತಿಗೆದಾರರಿಗೆ ಸಚಿವರು ಬಂಪರ್ ಗಿಫ್ಟ್ ನೀಡಿದ್ದಾರೆ. ಹೇಮಾವತಿ ಎಡದಂಡೆ ನಾಲೆಯ ಕೋಟಿ ಕೋಟಿ ವೆಚ್ಚದ ಕಾಮಗಾರಿಗಳನ್ನು 4ಎ ಕಾಮಗಾರಿಯಡಿ ತಮ್ಮ ಆಪ್ತ ಗುತ್ತಿಗೆದಾರರಿಗೆ ಕೊಡಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಸರ್ಕಾರ ಅನುಮೋದಿಸಿದ್ದು 3, ಅಧಿಕಾರಿಗಳು ಗುತ್ತಿಗೆ ಕೊಟ್ಟಿದ್ದು 10 ಕಾಮಗಾರಿ!
ತಾಲೂಕಿನಲ್ಲಿ ಕಳೆದ ವರ್ಷ ಪ್ರವಾಹ ಬಂದು ಹಲವು ಪ್ರದೇಶಗಳು ಹಾನಿಗೊಳಗಾಗಿದ್ದವು. ಇದನ್ನೇ ನೆಪ ಮಾಡಿಕೊಂಡು BSY ಸರ್ಕಾರದಿಂದ ಸುಮಾರು 10 ಕೋಟಿಯ ಅನುದಾನವನ್ನು ತುರ್ತು ಕಾಮಗಾರಿಗೆಂದು ಬಿಡುಗಡೆ ಮಾಡಿಸಿದ್ದಾರೆ. ಸರ್ಕಾರ 10 ಕೋಟಿ ಮೊತ್ತದ 3 ಕಾಮಗಾರಿಗೆ ಅನುಮೋದನೆ ನೀಡಿದ್ರೆ, ಅಧಿಕಾರಿಗಳು ಸಚಿವರ ಪ್ರಭಾವಕ್ಕೆ ಮಣಿದು 10 ಕಾಮಗಾರಿಗಳನ್ನ ಗುತ್ತಿಗೆ ನೀಡಿದ್ದಾರೆ.
ಸಚಿವರ ಪ್ರಭಾವಕ್ಕೆ ಮಣಿದು, ಆಪ್ತ ಗುತ್ತಿಗೆದಾರರಿಗೆ ಟೆಂಡರ್-ಆರೋಪ!
ಗುತ್ತಿಗೆ ಪಡೆದ ಎಲ್ಲರೂ ಸಚಿವರ ಆಪ್ತ ಗುತ್ತಿಗೆದಾರರು ಎನ್ನಲಾಗ್ತಿದೆ. ಕಾವೇರಿ ನೀರಾವರಿ ನಿಗಮದ ಇ.ಇ.ಶ್ರೀನಿವಾಸ್ ಕೂಡ ಸಚಿವರ ಪ್ರಭಾವಕ್ಕೆ ಮಣಿದು ಸರ್ಕಾರದ ನಿಯಮವನ್ನ ಗಾಳಿಗೆ ತೂರಿದ್ದಾರೆ. ಯಾವುದೇ ಇ.ಎಂ.ಡಿ ಪಡೆಯದೆ, ತಾಂತ್ರಿಕ ಅನುಮೋದನೆ ಕೂಡ ಪಡೆಯದೆ, ದೊದ್ದನ ಕಟ್ಟೆ, ಮಡುವಿನಕೋಡಿ, ಲಿಂಗಾಪುರ, ಕೃಷ್ಣಾಪುರ ಕೆರೆಯ ಕಾಮಗಾರಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಎಸಿಬಿ, ಲೋಕಾಯುಕ್ತಕ್ಕೆ ದೂರು!
ಅಲ್ದೆ, ಕಳಪೆ ಕಾಮಗಾರಿ ಮಾಡ್ತಿದ್ದು, ಯಾವುದೇ ಪಾರದರ್ಶಕ ನಿಯಮ ಪಾಲಿಸಿಲ್ಲ. ಲಾಕ್ಡೌನ್ ಅವಧಿಯಲ್ಲಿ ಕೆಲಸ ಮಾಡಿಸಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ತನಿಖೆ ನಡೆಸುವಂತೆ ಎಸಿಬಿ, ಲೋಕಾಯುಕ್ತಕ್ಕೆ ಸ್ಥಳೀಯರಾದ ಬಸ್ ಕೃಷ್ಣೇಗೌಡ, ನಾಗೇಗೌಡ ಎಂಬುವವರು ದೂರು ನೀಡಿದ್ದಾರೆ.
ಆರೋಪ ಅಲ್ಲಗಳೆದ ಸಚಿವ, ಅಧಿಕಾರಿ!
ಇನ್ನು ಈ ಎಲ್ಲಾ ಆರೋಪಗಳನ್ನ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್ ಅಲ್ಲಗಳೆದಿದ್ದಾರೆ. ಎಲ್ಲವೂ ಪಾರದರ್ಶಕವಾಗಿದೆ, ಕಾನೂನು ಬದ್ಧವಾಗಿದೆ. ನಮ್ಮಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಕೆಲಸ ಮಾಡಲಾಗ್ತಿದೆ. ಕೊರೋನಾದ ಲಾಕ್ಡೌನ್ ಕಾರಣದಿಂದ ಕೆಲವು ವಿಳಂಬ ಆಗಿದೆ ಅಂತಾ ಇಇ ಶ್ರೀನಿವಾಸ್ ಹೇಳಿದ್ರೆ, ಸಚಿವ ನಾರಾಯಣಗೌಡ ಇದ್ರಲ್ಲಿ ನನ್ನ ಪಾತ್ರವಿಲ್ಲ. ನಾನು ಯಾವುದೇ ಗುತ್ತಿಗೆದಾರನ ಜೊತೆ ಸಂಬಂಧ ಇಟ್ಕೊಂಡಿಲ್ಲ. ತಾಲೂಕಿನ ಅಭಿವೃದ್ದಿಗೆ ಬದ್ಧ ಅಂತಿದ್ದಾರೆ.
ಏನೇ ಆಗ್ಲೀ, ಪ್ರಕರಣವೀಗ ಎಸಿಬಿ ಮತ್ತು ಲೋಕಾಯುಕ್ತದ ಅಂಗಳದಲ್ಲಿದೆ. ಎರಡೂ ತನಿಖಾ ಸಂಸ್ಥೆಗಳು ಪಾರದರ್ಶಕವಾಗಿ ತನಿಖೆ ನಡೆಸಲಿವೆಯ ಕಾದು ನೋಡಬೇಕಿದೆ.
….
ಡಿ.ಶಶಿಕುಮಾರ್, ಮಂಡ್ಯ.