ಶಿವಮೊಗ್ಗ: ದೂರದ ಗಡಿ ಪ್ರದೇಶ ಬೆಳಗಾವಿಗೂ, ಮಲೆನಾಡು ಜಿಲ್ಲೆ ಶಿವಮೊಗ್ಗಕ್ಕೂ ಬಾಂಧವ್ಯದ ಬೆಸುಗೆ ಬೆಸೆದಿದೆ. ಅದು ಕಾಂಗ್ರೆಸ್ ನಾಯಕರ ಮನೆಯ ಮದುವೆ ಮೂಲಕ. ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕುಟುಂಬದ ನೆಂಟಸ್ತನವಾಗಿದೆ. ಶಿವಮೊಗ್ಗದಲ್ಲಿ ಈ ಕುಟುಂಬದ ಕುಡಿಗಳ ನಿಶ್ಚಿತಾರ್ಥ ನೆರವೇರಿದ್ದು, ಪದ್ಧತಿಯಂತೆ, ಈ ಕಾರ್ಯಕ್ರಮ ಸಾಂಗೋಪಾಂಗವಾಗಿ ನೆರವೇರಿದೆ.
ಭದ್ರಾವತಿಯ ಶಾಸಕ ಸಂಗಮೇಶ್ವರ್ ಅವರ ಸಹೋದರ ಬಿ.ಕೆ. ಶಿವಕುಮಾರ್ ಅವರ ಪುತ್ರಿ ಹಿತಾ ಅವರೊಂದಿಗೆ, ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರ ನಿಶ್ಚಿತಾರ್ಥ ನೆರವೇರಿತು. ಈ ಮೂಲಕ, ರಾಜಕೀಯ ಕುಟುಂಬವೊಂದು ನೆಂಟಸ್ತನ ಬೆಸೆದುಕೊಂಡ ಉದಾಹರಣೆಯಲ್ಲಿ ಈ ಕುಟುಂಬಗಳು ಕೂಡ ಒಂದಾಯಿತು. ಮಲೆನಾಡಿನ ಭದ್ರಾ ದಂಡೆಯ ಮಗಳು, ನಮ್ಮ ಮನೆಯ ಸೊಸೆಯಾಗುತ್ತಿರುವುದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದ್ರು. ಇದೊಂದು ಋಣಾನುಬಂಧವಾಗಿದ್ದು, ಹುಡುಗ ಹುಡುಗಿ ಒಪ್ಪಿಕೊಂಡು ಈ ಮದುವೆ ನಿಶ್ಚಯವಾಗಿದ್ದು, ಎರಡೂ ಕುಟುಂಬಗಳು ಸಂತೋಷದಿಂದ ಒಪ್ಪಿ ನಿಶ್ಚಿತಾರ್ಥ ನೆರವೇರಿಸಿವೆ.
ಅಂದಹಾಗೆ, ನಿಶ್ಚಿತಾರ್ಥದಲ್ಲಿ ಬಂದ ಅತಿಥಿಗಳು ಮತ್ತು ಆಹ್ವಾನಿತರಿಗೆಲ್ಲರಿಗೂ ಸಂಗಮೇಶ್ ಕುಟುಂಬ ಮೈಸೂರು ಪೇಟ ತೊಡಿಸಿ ಬರಮಾಡಿಕೊಂಡಿದ್ದಲ್ಲದೇ, ಆತಿಥ್ಯ ಕೂಡ ಭರ್ಜರಿಯಾಗಿಯೇ ನೀಡಿದ್ರು. ಇನ್ನು ನಿಶ್ಚಿತಾರ್ಥಕ್ಕೆ, ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಮುಖಂಡರುಗಳು ಪಾಲ್ಗೊಂಡಿದ್ರು. ಪರಸ್ಪರ ವಜ್ರದುಂಗುರ ಬದಲಾಯಿಸಿಕೊಂಡ ವಧು-ವರ, ಆಹ್ವಾನಿತ ಗಣ್ಯರು ಮತ್ತು ಹಿರಿಯರಿಂದ ಆಶೀರ್ವಾದ ಪಡೆದ್ರು. ಈ ವೇಳೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಕ್ಕೆ, ಶಾಸಕಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಸೊಸೆಯಲ್ಲ, ಮಗಳಾಗಿ ನೀಡುತ್ತಿದ್ದೆವೆ ಎಂದು ಶಾಸಕ ಸಂಗಮೇಶ್ ಸಂತಸ ಹಂಚಿಕೊಂಡರು. ಅಲ್ಲದೇ, ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮರಾಗಿ ಹೋರಾಟ ಮಾಡಿಕೊಂಡು, ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಕುಟುಂಬಂದೊಂದಿಗೆ ಬಾಂಧವ್ಯ ಬೆಸೆದಿರುವುದು ಸಂತಸವಾಗಿದೆ ಎಂದ್ರು. ನವೆಂಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಗೋವಾದಲ್ಲಿ ನಿಶ್ಚಯವಾಗಿದ್ದು, ಎರಡೂ ರಾಜಕೀಯ ಕುಟುಂಬಗಳು, ಸಂಭ್ರಮದಿಂದ ಇಂದು ಒಂದಾಗಿವೆ.
– ಮೋಹನಕೃಷ್ಣ, ಪವರ್ ಟಿ.ವಿ