Wednesday, January 22, 2025

ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಮನೆ ಮನೆಯಲ್ಲಿ ಮಣ್ಣಿನ ಗಣಪ ಅಭಿಯಾನ

ವಿಜಯಪುರ : ‘ನನ್ನ ಗಿಡ ನನ್ನ ಭೂಮಿ’ ಎಂಬ ಸಂಘಟನೆಯ ಕಾರ್ಯಕರ್ತರು ಕಳೆದ ನಾಲ್ಕೈದು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಗಿಡ ನೆಡುವುದು ಹಾಗೂ ಜಲ ಸಂರಕ್ಷಣೆಯ ಅಭಿಯಾನ ಮಾಡುವುದು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಈ ಬಾರಿ ’ಮನೆ ಮನೆಗೆ ಮಣ್ಣಿನ ಗಣಪ’ ಎಂಬ ಅಭಿಯಾನ ನಡೆಸುವ ಮೂಲಕ ಜಲ ಸಂರಕ್ಷಣೆಗೆ ಮುಂದಾಗಿದ್ದಾರೆ.

ಕೊರೋನಾ ಮಹಾಮಾರಿಯಿಂದಾಗಿ ವಿಜಯಪುರ ಜಿಲ್ಲಾಡಳಿತ ಈಗಾಗಲೇ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದೆ, ಇದರ ಜೊತೆಗೆ ಹಲವು ಕಂಡೀಷನ್ ಹಾಕುವ ಮೂಲಕ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶನ ಪ್ರತಿಷ್ಟಾಪನೆಗೂ ನಿರ್ಬಂಧ ವಿಧಿಸಿದೆ. ಇದರ ಮದ್ಯೆ ನನ್ನ ಗಿಡ ನನ್ನ ಭೂಮಿ ಎಂಬ ಸಂಘಟನೆಯ ಕಾರ್ಯಕರ್ತರು ಕೂಡಾ ಜಿಲ್ಲಾಡಳಿತಕ್ಕೆ ಬೆಂಬಲವೆಂಬಂತೆ ಮಣ್ಣಿನ ಗಣಪತಿಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಸಂಘಟನೆಯು ಹಲವು ರೀತಿಯಲ್ಲಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದು ಈ ಬಾರಿ ಗಣೇಶೋತ್ಸವದಲ್ಲೂ ಮುಂದೆ ಬಂದಿದೆ. ಈಗಾಗಲೇ ಜಿಲ್ಲಾಡಳಿತ ಗಣಪತಿ ದೇವಸ್ಥಾನಗಳಲ್ಲಿ ನಾಲ್ಕು ಅಡಿ ಎತ್ತರದ ಗಣೇಶ ಹಾಗೂ ಮನೆಯಲ್ಲಿ ಪ್ರತಿಷ್ಟಾಪನೆ ಮಾಡಿದರೆ ಎರಡು ಅಡಿ ಎತ್ತರದ ಗಣೇಶನ ಮೂರ್ತಿ ಇರಬೇಕು ಎಂದು ಸೂಚನೆ ನೀಡಿದೆ. ಆ ಹಿನ್ನಲೆಯಲ್ಲಿ ಅದೇ ತರಹದ ಗಣೇಶನ ಮೂರ್ತಿಗಳನ್ನು ಈ ಸಂಘಟನೆಯ ಸದಸ್ಯರು ಮಾರಾಟಕ್ಕೆ ಮುಂದಾಗಿದ್ದಾರೆ.‌ ಇನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸಿಗುವ ಗಣಪತಿಗಳು ಇಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ.

ಇನ್ನು ಇಲ್ಲಿ ನಾನಾ ರೂಪದ ಗಣೇಶನ ವಿಗ್ರಹಗಳು ಮಾರಾಟಕ್ಕೆ ಇಡಲಾಗಿದೆ. ಇವುಗಳಿಗೆ ಯಾವುದೇ ಬಣ್ಣವನ್ನು ಸಹ ಬಳಸಿಲ್ಲ ಇನ್ನೂ ಇವುಗಳು ಸಂಪೂರ್ಣವಾಗಿ ಮಣ್ಣಿನಿಂದ ಮಾಡಲಾಗಿದೆ. ಬಣ್ಣ ಹಚ್ಚಿದ ಗಣಪನನ್ನು ನೀರಿನಲ್ಲಿ ಹಾಕಿದರೆ ನೀರು ಕಲುಷಿತವಾಗುತ್ತದೆ ಎಂದು ಸಂಪೂರ್ಣವಾಗಿ ಮಣ್ಣಿನಿಂದ ಮಾಡಿದ ಗಣಪನನ್ನೇ ಇಲ್ಲಿ ಇಟ್ಟಿದ್ದಾರೆ. ಇನ್ನೂ ನನ್ನ ಗಿಡ ನನ್ನ ಭೂಮಿ‌ ಎಂಬ ಸಂಘಟನೆಯ ಯುವಕರು ಕಳೆದ ವರ್ಷದಿಂದ ಸಾರ್ವಜನಿಕರಿಗೆ ಪರಿಸರದ ಜಾಗೃತಿ ಮೂಡಿಸಲು ಮಣ್ಣಿನ ಗಣೇಶನನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಇದರಿಂದ ಯಾವುದೇ ರೀತಿಯ ಹಣ ಗಳಿಸುವ ಉದ್ದೇಶದಿಂದ ಇವರು ಮಾಡದೇ, ಸಮಾಜದಲ್ಲಿ ಪರಿಸರದ ಮಹತ್ವ ತಿಳಿಸುವುದರ ಜೊತೆಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇನ್ನೂ ಇವರ ಬಳಿ ಒಂದು ಗಣೇಶನ ಮೂರ್ತಿ ಖರೀದಿ ಮಾಡಿದರೆ ಜೊತೆಗೆ ಒಂದು ಸಸಿಯನ್ನೂ ನೀಡುವುದರ ಮೂಲಕ ಜನರಿಗೆ ಪರಿಸರದ ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನೂ ಈ ಗಣೇಶನ ವಿಸರ್ಜನೆ ಸಹಿತ ಮನೆಯಲ್ಲಿಯೇ ಯಾವುದಾದರೂ ಬಕೆಟ್ ನಲ್ಲಿ ಇಟ್ಟರೆ ಸಾಕು ಎರಡು ದಿನದಲ್ಲಿ ಅದು ಕರಗಿ ಹೋಗುತ್ತದೆ, ಅದೇ ನೀರನ್ನು ಗೊಬ್ಬರದ ರೂಪದಲ್ಲಿ ಬಳಸಬಹುದಾಗಿದೆ. ಕಲುಷಿತ ಬಣ್ಣ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣಪತಿ ಬಳಸುವ ಬದಲು ಇಂತಹ ಪರಿಸರ ಸ್ನೇಹಿ ಗಣಪತಿಯನ್ನೇ ಜನರು ಪ್ರತಿಷ್ಟಾಪನೆ ಮಾಡಬೇಕು ಎಂಬುದೇ ನಮ್ಮ ಆಶಯ.

RELATED ARTICLES

Related Articles

TRENDING ARTICLES