ಕೋಲಾರ : ಜಿಲ್ಲೆಯ ಕೈಗಾರಿಕೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಾಣವಾಗುವ ಘಳಿಗೆ ಸಮೀಪಿಸುತ್ತಿದೆ. ವಿಶ್ವದ ಹೆಸರಾಂತ ಆಪಲ್ ಕಂಪನಿಯ ಐ-ಫೋನ್ ಮೊಬೈಲ್ ಗಳು ಇನ್ನು ಮುಂದೆ ಕೋಲಾರದಲ್ಲಿ ತಯಾರಾಗಲಿವೆ. ಬಿಡಿ ಭಾಗಗಳ ತಯಾರಿಕೆ ಮತ್ತು ಜೋಡಣೆಯಲ್ಲಿ ಪ್ರಸಿದ್ದಿಯಾಗಿರುವ ವಿಸ್ಟ್ರಾನ್ ಕಂಪೆನಿಯು ಇಷ್ಟರಲ್ಲೇ ಇಲ್ಲಿ ಕಾರ್ಯಾರಂಭ ಮಾಡಲಿದೆ.
ಕೋಲಾರ ಜಿಲ್ಲೆಯಲ್ಲಿ ಹತ್ತು ವರ್ಷಗಳಿಂದೀಚೆಗೆ ಕೈಗಾರಿಕಾ ಕ್ರಾಂತಿ ಶುರುವಾಗಿದೆ. ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಈಗಾಗಲೇ ಪ್ರತಿಷ್ಟಿತ ಕಂಪೆನಿಗಳು ಕಾರ್ಯಾಚರಿಸುತ್ತಿದೆ. ಈ ಮಧ್ಯೆ, ಪ್ರಪಂಚದ ಹೆಸರಾಂತ ಬಿಡಿ ಭಾಗಗಳ ತಯಾರಿಕೆ ಮತ್ತು ಜೋಡಣೆಯ ವಿಸ್ಟ್ರಾನ್ ಕಂಪೆನಿಯು ಇಲ್ಲಿಯೇ ಶುರುವಾಗಲಿದೆ. ವಿಸ್ಟ್ರಾನ್ ಕಂಪೆನಿಯ ಮೂಲಕ ಆಪಲ್ ಕಂಪೆನಿಯ ಐ-ಫೋನ್ ಗಳು ಇಲ್ಲಿ ಸಿದ್ದವಾಗಿ ಮಾರುಕಟ್ಟೆಗೆ ಬರಲಿದೆ.
ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಅಚ್ಚಟ್ನಹಳ್ಳಿಯಲ್ಲಿ ವಿಸ್ಟ್ರಾನ್ ಕಂಪೆನಿಗಾಗಿ 2018 ರಲ್ಲಿ 43 ಎಕರೆ ಜಮೀನು ಮಂಜೂರಾಗಿತ್ತು. ಪ್ರಸ್ತುತ ಇದೇ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬೃಹತ್ ಕಾರ್ಖಾನೆಯಲ್ಲಿ ಆಪಲ್ ಕಂಪೆನಿಯ ಐ-ಫೋನ್ ಮೊಬೈಲ್ ಗಳನ್ನು ವಿಸ್ಟ್ರಾನ್ ಕಂಪೆನಿಯು ತಯಾರಿಸಲಿದೆ. ಸುಮಾರು ಮೂರು ಸಾವಿರ ಕೋಟಿ ವೆಚ್ಚದಲ್ಲಿ ಇಲ್ಲಿನ ವಿಸ್ಟ್ರಾನ್ ಕಂಪೆನಿಯನ್ನು ಅಭಿವೃದ್ದಿ ಪಡಿಸಲಾಗಿದೆ.
ಮೂಲತಃ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯ ಕೋಲಾರದ ಘಟಕದಲ್ಲಿ ಪ್ರಮುಖವಾಗಿ ಆಪಲ್ ಕಂಪೆನಿಯ ಐ-ಫೋನ್ ಗಳನ್ನು ತಯಾರಿಸಲು ಆದ್ಯತೆ ಕೊಡಲಾಗಿದೆ. ಈ ಕಂಪೆನಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ನೌಕರರಿಗೆ ಕೆಲಸಕ್ಕೆ ಅವಕಾಶವಿದ್ದು, ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯುವ ಆಶಾಭಾವನೆಯಿದೆ.
ಒಟ್ನಲ್ಲಿ, ಬರಗಾಲದ ಜಿಲ್ಲೆ ಅನ್ನೋ ಅಪಖ್ಯಾತಿಗೆ ಗುರಿಯಾಗಿರುವ ಕೋಲಾರದಲ್ಲಿ ವಿಶ್ವದ ಅಗ್ರಮಾನ್ಯ ಕಂಪನಿಗಳು ಅಸ್ತಿತ್ವ ಕಂಡುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
-ಆರ್.ಶ್ರೀನಿವಾಸಮೂರ್ತಿ