ವಿಜಯಪುರ: ಸರ್ವಧರ್ಮ ಸಮನ್ವಯ ಸಾರುವ ದೇಶ ನಮ್ಮದು, ಯಾವುದೇ ಉತ್ಸವವಿರಲಿ ಭಾವೈಕ್ಯತೆ ಕಂಡು ಬರುತ್ತದೆ. ಇನ್ನೇನು ಕೆಲ ದಿನಗಳಲ್ಲಿ ಗಣೇಶೋತ್ಸವ ಪ್ರಾರಂಭವಾಗಲಿದೆ. ವಿಘ್ನ ನಿವಾರಕ ಮನೆ ಮನೆಗೂ ಆಗಮಿಸಲಿದ್ದಾನೆ. ಗಣೇಶನಿಗೆ ಇರುವ ಹಲವು ರೂಪಗಳು ಕಲಾವಿದನ ಕೈಯಲ್ಲಿ ಅರಳಿವೆ. ಗುಮ್ಮಟನಗರಿ ವಿಜಯಪುರದಲ್ಲಿಯೂ ಗಣೇಶ ವಿವಿಧ ರೂಪಗಳಲ್ಲಿ ಅರಳಿದ್ದಾನೆ.
ಆದ್ರೆ ಇಲ್ಲಿ ಗಣಪ ಅರಳಿದ್ದು ಮಣ್ಣಿನ ರೂಪದಲ್ಲಿ ಅಲ್ಲ, ಪೇಂಟಿಂಗ್ ರೂಪದಲ್ಲಿ. ಹೀಗೆ ತನ್ನಲ್ಲಿರೋ ಪ್ರತಿಭೆಯನ್ನು ತೋರಿದ್ದು ಮುಸ್ಲಿಂ ಕಲಾವಿದ. ಈತನ ಹೆಸರು ಮುಸ್ತಾಕ್ ತಿಕೋಟಾ ಎಂದು. ವಿಜಯಪುರ ನಗರದ ಜೇಲ ದರ್ಗಾದ ನಿವಾಸಿಯಾಗಿರುವ ಮುಸ್ತಾಕ್ ಗಣೇಶನ ವಿವಿಧ ರೂಪಗಳನ್ನು ಪೇಂಟಿಂಗ್’ನಲ್ಲಿ ಚಿತ್ರಿಸಿದ್ದಾರೆ. ವಿಜಯಪುರ ನಗರದ ಹಲವೆಡೆ ತಮ್ಮ ಪೇಂಟಿಂಗ್ ಪ್ರದರ್ಶನ ಮಾಡಿದ್ದಾರೆ. ಇನ್ನೂ ಇವರು ಪ್ರದರ್ಶನಕ್ಕೆ ಇಟ್ಟ ಪೇಂಟಿಂಗ್ ಗಳನ್ನು ವಿಕ್ಷಿಸಿದ ಜನರು ಮುಸ್ತಾಕ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಈ ಕುರಿತು ಮಾತನಾಡಿದ ಮುಸ್ತಾಕ್ ತಾನು ಮೊದಲಿನಿಂದಲೂ ಚಿತ್ರ ಕಲಾವಿದನಾಗಿದ್ದು, ಕಲೆಗೆ ಧರ್ಮ ಜಾತಿ ಅಡ್ಡ ಬರೋದಿಲ್ಲ, ನಾನು ಮುಸ್ಲಿಂ ಆದರೂ ಕೂಡಾ ಗಣೇಶನ ಚಿತ್ರಗಳನ್ನು ಬಿಡಿಸಿದ್ದೀನಿ. ಹಲವರು ನನ್ನ ಕಲೆಗೆ ಪ್ರೋತ್ಸಾಹ ನೀಡಿದ್ದಾರೆ ಎನ್ನುತ್ತಾರೆ ಮುಸ್ತಾಕ್.