`ಎಳೆಯರು ನಾವು ಗೆಳೆಯರು’ ಅನ್ನೋ ಮಕ್ಕಳ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿ, ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಕ್ಕೇ ರಾಜ್ಯಪ್ರಶಸ್ತಿ ಪಡೆದ ವಿಕ್ರಮ್ ಸೂರಿ ಇದೀಗ ನವಿರಾದ ಪ್ರೇಮಕಥೆ ಹೇಳಲು ಹೊರಟಿದ್ದಾರೆ. ಅದುವೇ ಚೌಕಾಬಾರ!
ಮಣಿರಾವ್ ಅವರ ಭಾವನಾ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ವಿಕ್ರಮ್ ಅವರ ಪತ್ನಿ ನಮಿತಾ ರಾವ್ ನಾಯಕಿಯಾಗಿ ನಟಿಸುವುದರ ಜೊತೆಗೆ ಬಂಡವಾಳ ಕೂಡ ಹಾಕುತ್ತಿದ್ದಾರೆ. ವಿಕ್ರಮ್ ಸೂರಿ – ನಮಿತಾ ರಾವ್ ದಂಪತಿಯ ` ನಮಿ ನಿರ್ಮಿತಿ’ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣವಾಗ್ತಿದೆ.
ಚೌಕಾಬಾರ ಯುವಪೀಳಿಗೆ ಮತ್ತವರ ಸ್ನೇಹ – ಪ್ರೀತಿ ಪರಿಕಲ್ಪನೆ ಸುತ್ತ ಸುತ್ತುವ ಚಿತ್ರ. ನಾಲ್ವರು ಸ್ನೇಹಿತರ ನಡುವೆ ನಡೆಯುವ ಕಥೆಯಿದು. ಕಥಾವಸ್ತು ಮತ್ತು ಪಾತ್ರಗಳಿಗೆ ಹೊಂದಾಣಿಕೆಯಾಗುವಂತೆ ಶೀರ್ಷಿಕೆ ಇಟ್ಟಿದ್ದೇವೆ. ಕಾದಂಬರಿಯ ಭಾವನ ಪಾತ್ರದಲ್ಲಿ ನಮಿತಾ ರಾವ್ ನಟಿಸುತ್ತಿದ್ದಾರೆ. ರಂಗಭೂಮಿ ಕಲಾವಿದ ಪ್ರಭಂಜನ್ ವಿಹಾನ್ ಈ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಡ್ತಿದ್ದಾರೆ. ಎರಡನೇ ನಾಯಕಿಯಾಗಿ ಕಾವ್ಯ ರಮೇಶ್, ಎರಡನೇ ನಾಯಕನಾಗಿ ಸುಜಯ್ ಹೆಗಡೆ ಅಭಿನಯಿಸುತ್ತಿದ್ದಾರೆ ಎಂದು ಚಿತ್ರ, ಚಿತ್ರದಲ್ಲಿನ ಪಾತ್ರದ ಬಗ್ಗೆ ಹೇಳಿದ್ದಾರೆ ಡೈರೆಕ್ಟರ್ ವಿಕ್ರಮ್ ಸೂರಿ.
ನಿರ್ಮಾಪಕಿ + ನಾಯಕಿ : ಸಿಲ್ಲಿಲಲ್ಲಿ ಹಾಸ್ಯಧಾರವಾಹಿ ಖ್ಯಾತಿಯ ನಟಿ ನಮಿತಾರಾವ್ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 2014ರಲ್ಲಿ ತೆರೆಕಂಡ ವೆಂಕಟಾಚಲ ನಿರ್ದೇಶನದ `ಚಿತ್ರಮಂದಿರದಲ್ಲಿ’ ಎಂಬ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಎಂಟ್ರಿಕೊಟ್ಟಿದ್ದ ನಮಿತಾ ರಾವ್ ಬೆಳ್ಳಿತೆರೆ ಮತ್ತು ಕಿರುತೆರೆ ಎರಡಲ್ಲೂ ತಮ್ಮದೇಯಾದ ಛಾಪುಮೂಡಿಸಿದ್ದಾರೆ.
ಚೌಕಾಬಾರದ ತಮ್ಮ ಪಾತ್ರದ ಬಗ್ಗೆ ಮಾತನಾಡಿರೋ ನಮಿತಾ ರಾವ್, “ ಭಾವನ ಪಾತ್ರದಲ್ಲಿ ನಾನು ನಟಿಸ್ತಿದ್ದೀನಿ. ಮನೆಯಲ್ಲಿ ಮುದ್ದಾಗಿ ಬೆಳೆದ ಹುಡ್ಗಿ… ಬೋಲ್ಡ್ & ಬ್ಯೂಟಿಫುಲ್ ಹುಡ್ಗಿ… ಜೊತೆಗೆ ನೇರ ಮಾತುಗಾರ್ತಿ’’ ಅಂತ ತಿಳಿಸಿದ್ದಾರೆ.
ಒಟಿಟಿಯಲ್ಲಿ ರಿಲೀಸ್ : ಕೊರೋನಾ ಲಾಕ್ಡೌನ್ ಮುನ್ನವೇ ಸಿನಿಮಾ ಸೆಟ್ಟೇರಿದ್ದು, ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು ಏಳೆಂಟು ದಿನಗಳ ಶೂಟಿಂಗ್ ಬಾಕಿಯಿದೆ. ದಾಂಡೇಲಿ, ಕಾರವಾರ ಸುತ್ತಮುತ್ತ ಚಿತ್ರೀಕರಿಸುವ ಪ್ಲ್ಯಾನ್ನಲ್ಲಿದೆ ಚಿತ್ರತಂಡ. ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಬಾಕಿ ಶೂಟಿಂಗ್ ಮುಗಿಸಿ, ಆದಷ್ಟು ಬೇಗ ಒಟಿಟಿಯಲ್ಲಿ ರಿಲೀಸ್ ಮಾಡಲು ಉದ್ದೇಶಿಸಿದ್ದಾರೆ.