Wednesday, January 22, 2025

“ಬಾಡಿ”ದ ಬಿಲ್ಡರ್ ಬದುಕು

ಚಿಕ್ಕಮಗಳೂರು : ಆ ಯುವಕ ಕಂಡ ಕನಸು ಅಂತಿಂಥದಲ್ಲ.. ಹಾಗಂತ ಕನಸು ಕಂಡು ಸುಮ್ಮನೆ ಇರಲಿಲ್ಲ. ಅದಕ್ಕೆ ತಕ್ಕಂತೆ ಪ್ರತಿನಿತ್ಯ ಪರಿಶ್ರಮ ಹಾಕ್ತಾನೆ ಬರ್ತಿದ್ದ. ಹಾರ್ಡ್ ವರ್ಕೌಟ್ ಮಾಡ್ತಿದ್ದ ಆತ ಮುಂದೊಂದು ದಿನ ಜಿಲ್ಲೆಗೆ, ರಾಜ್ಯಕ್ಕೆ ಹೆಸರು ತರಲೇ ಬೇಕೆಂದು ಬೆವರು ಸುರಿಸುತ್ತಲೇ ಇದ್ದ. ಆದ್ರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನೋ ಹಾಗೆ ಕಂಡ ಕನಸು ನನಸಾಗುವಷ್ಟರಲ್ಲಿ ಕೊರೋನಾ ಆತನನ್ನ ಪರೋಕ್ಷವಾಗಿ ಬಲಿ ಪಡೆದು ಬಿಟ್ಟಿದ್ದು ನಿಜಕ್ಕೂ ದುರಂತ..

ಕಟ್ಟುಮಸ್ತಾದ ದೇಹ..! ಆರೂವರೆ ಅಡಿ ಹೈಟು..! ಖಡಕ್ ಲುಕ್ಕು..! ಸಿನಿಮಾ ಹೀರೋಗಳನ್ನ ನಾಚಿಸೋ ಪರ್ಸನಾಲಿಟಿ..! ಯಾರೇ ಈ ದೇಹವನ್ನ ನೋಡಿದ್ರೂ ಒಂದು ಕ್ಷಣ ವಾಹ್ ಅಂತಾ ಉದ್ಗಾರ ತೆಗೆಯದೇ ಸುಮ್ನೆ ಇರ್ತಾ ಇರ್ಲಿಲ್ಲ. ಅಷ್ಟೊಂದ್ ಫಿಟ್ ಆಗಿ, ಸಿಕ್ಸ್ ಪ್ಯಾಕ್ ಮೆಂಟೈನ್ ಮಾಡ್ತಿದ್ದ ಜೀವವಿದು. ಹೀಗೆ ಗಡಸು ದೇಹವನ್ನ ಇಡ್ಕೊಂಡ್ರೂ ಮನಸ್ಸು ಮಾತ್ರ ಕೋಮಲ, ಮೃದು ಸ್ವಭಾವದ ವ್ಯಕ್ತಿತ್ವ. ಹೆಸ್ರು ಸುನೀಲ್.. ಜಿಮ್ ಸುನಿ.. ಮಿಸ್ಟರ್ ಕೊಪ್ಪ ಅಂತಾ ಹೆಸರು ಪಡೆದುಕೊಂಡದ್ದ ಸಂಭಾವಿತ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ದೂಬ್ಳ ಗ್ರಾಮದ ನಿವಾಸಿ. ಬಡತನದ ಗೆರೆಯಲ್ಲೇ ಬದುಕಿದ ಸುನೀಲ್ ಗೆ ಬಾಡಿಯನ್ನ ಬಿಲ್ಡ್ ಮಾಡ್ಬೇಕು, ಜಿಲ್ಲೆ, ರಾಜ್ಯಕ್ಕೆ ಕೀರ್ತಿಯನ್ನ ತರ್ಬೇಕು ಅಂತಾ ತುಂಬಾನೇ ಆಸೆ ಇತ್ತು. ಹೀಗೆ ಕನಸು ಕಂಡಿದ್ದ ಯುವಕ, ಸುಮ್ಮನಿರಲಿಲ್ಲ ಪ್ರತಿನಿತ್ಯ ಆರರಿಂದ ಏಳು ಗಂಟೆ ಬೆವರು ಸುರಿಸ್ತಿದ್ದ. ದೂಬ್ಳ ಗ್ರಾಮದ ಪಕ್ಕದ ಜಯಪುರ ಪಟ್ಟಣದ ಜಿಮ್ ಒಂದರಲ್ಲಿ ಟ್ರೈನರ್ ಆಗಿ ಕೂಡ ಕೆಲಸ ನಿರ್ವಹಿಸುತಿದ್ದ. ಜಿಮ್ ಸೇರೋಕೆ ಮುಂಚೆ ಒಂದಂಕಿ ಇದ್ದ ಗ್ರಾಹಕರು, ಸುನೀಲ್ ಜಿಮ್ ತರಬೇತಿದಾರನಾಗಿ ಬಂದೊಡನೆ ನೂರರ ಸಂಖ್ಯೆಯಲ್ಲಿ ಜಿಮ್ ಗೆ ಸೇರಿಕೊಂಡರು. ಹಾಗೇ ಇತ್ತು ಸುನೀಲ್ ಜಿಮ್ ಟ್ರೈನಿಂಗ್. ಎಲ್ಲವೂ ಸರಿಯಾಗಿ ನಡೀತಿದೆ ಅನ್ನುವಷ್ಟರಲ್ಲಿ ಕ್ರೂರಿ ಕೊರೋನಾ ಎಲ್ಲರಂತೆ ಈ ಕಟುಮಸ್ತದ ಯುವಕನನ್ನ ಬಾಧಿಸಿತು. ಐದು ತಿಂಗಳ ಹಿಂದೆ ಜಿಮ್ ಬಾಗಿಲು ಹಾಕಿತು. ಹೀಗಾಗಿ ಜಿಮ್ ನಲ್ಲಿ ತಾನು ಪಡೆದುಕೊಳ್ತಿದ್ದ ಸಂಬಳಕ್ಕೂ ಕತ್ತರಿ ಬಿದ್ದಿತ್ತು. ಇನ್ನೊಂದೆಡೆ ತನ್ನ ಗಡುಸಾದ ದೇಹವನ್ನ ಉಳಿಸಿಕೊಳ್ಳಬೇಕು ಅಂದ್ರೆ ದಿನಕ್ಕೆ ಹಾಲು, ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರಕ್ಕೆ ಕನಿಷ್ಠ 500-750 ರೂಪಾಯಿವರೆಗೂ ಹಣ ಬೇಕಿತ್ತು. ಈ ಮಧ್ಯೆ ಸದ್ಯಕ್ಕೆ ಜಿಮ್ ಒಪನ್ ಆಗಲ್ಲ ಅಂತಾ ತಿಳಿದ ಸುನಿಲ್, ಈ ಹಣವನ್ನದ್ರೂ ಹೊಂದಿಸಿಕೊಳ್ಳೋಣ ಅಂತಾ ಎರಡು ತಿಂಗಳ ಹಿಂದೆಯಷ್ಟೆ ಆಟೋ ಓಡಿಸಿಯಾದ್ರೂ ಜೀವನ ನಡೆಸೋಣ ಅಂತಾ ತೀರ್ಮಾನಿಸಿ ಆಟೋ ಕೂಡ ತೆಗೆದುಕೊಂಡಿದ್ದ. ಆದ್ರೆ ಆಟೋ ಕೊಂಡರೂ ಕೂಡ ನಿರೀಕ್ಷೆ ಹುಸಿಯಾದಾಗ ಈ ಸ್ವಾಭಿಮಾನಿ ತೆಗೆದುಕೊಂಡಿದ್ದು ತಪ್ಪು ನಿರ್ಧಾರವನ್ನ.

ಹೌದು, ಯಾವಾಗ ತಾನು ಅಂದುಕೊಂಡ ಜೀವನ ಮಾಡಲು ಸಾಧ್ಯವಾಗ್ತಿಲ್ಲ, ತಾನು ಕಂಡ ಕನಸು ನೆರವೆರೋದು ಅನುಮಾನ ಎಂದುಕೊಂಡ ಸುನೀಲ್, ಜಿಮ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾನೆ. ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ತಂಗಿಗೆ ಊರುಗೋಲಾಗಿದ್ದ ಯುವಕ, ಕುಟುಂಬವನ್ನ ಸಾಕಲು ಆಗ್ತಿಲ್ಲವೆಂದು ಕೆಟ್ಟ ನಿರ್ಧಾರವನ್ನ ತೆಗೆದುಕೊಂಡು ಮೊದಲೇ ಕಂಗಲಾಗಿದ್ದ ಕುಟುಂಬಕ್ಕೆ ಮತ್ತಷ್ಟು ಹೊಡೆತ ನೀಡಿ ಹೋಗಿದ್ದಾನೆ.. ಅಪ್ಪ-ಅಮ್ಮ ನನ್ನನ್ನ ಕ್ಷಮಿಸಿ ಅಂತಾ ಡೆತ್ ನೋಟ್ ಬರೆದಿಟ್ಟು , ಕೂಲಿ ಮಾಡಿ ಜೀವನ ನಡೆಸ್ತಿದ್ದ ತಂದೆ ತಾಯಿಗೆ ತಾನೂ ಹೊರೆಯಾಗಬಾರದೆಂದು ಕ್ಷಮಿಸಲಾರದ ತಪ್ಪನ್ನ ಮಾಡಿದ್ದಾನೆ.

ಪ್ರಪಂಚವನ್ನ ಅಲುಗಾಡಿಸಿರೋ ಕ್ರೂರಿ ಕೊರೋನಾ ಮಲೆನಾಡಿನ ಯುವಕನ ಬಾಳಿನಲ್ಲೂ ಬಿರುಗಾಳಿಯಂತೆ ಬೀಸಿ ಬಲಿ ತೆಗೆದುಕೊಂಡು ಬಿಟ್ಟಿದೆ. ಕಠಿಣ ಪರಿಶ್ರಮದಿಂದ ಕಳೆದ ವರ್ಷ ಮಿಸ್ಟರ್ ಕೊಪ್ಪ ಅನ್ನೋ ಬಿರುದನ್ನ ಪಡೆದುಕೊಂಡಿದ್ದ ಸುನೀಲ್ ಇದೀಗ ಸ್ನೇಹಿತರ ಪಾಲಿಗೆ ನೆನಪಷ್ಟೇ. ಒಟ್ಟಾರೆ, ತನ್ನ ಬಲಿಷ್ಠ ದೇಹದಿಂದ ಎಂತೆಂಥವರಿಗೋ ಬೆವರಿಳಿಸಿದ ಮುಗ್ಧ ಹುಡುಗ ಇವತ್ತು ಕ್ರೂರಿ ಕೊರೋನಾಕ್ಕೆ ತಲೆಬಾಗಿದ್ದು ಮಾತ್ರ ನಿಜಕ್ಕೂ ದುರಂತ.

-ಸಚಿನ್ ಶೆಟ್ಟಿ

RELATED ARTICLES

Related Articles

TRENDING ARTICLES