ದೊಡ್ಡಬಳ್ಳಾಪುರ : ಜಿಲ್ಲೆಯ ಹುಲುಕುಂಟೆ ಗ್ರಾಮದಲ್ಲಿ ಯುವಕನೊಬ್ಬನ ಬರ್ಬರ ಹತ್ಯೆಯಾಗಿದೆ. ಮಂಜುನಾಥ್ (22) ಕೊಲೆಯಾದ ಯುವಕ.
ಹುಲುಕುಂಟೆ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ 207 ಹಾದು ಹೋಗಿದ್ದು, ಸ್ಥಳೀಯ ಯುವಕರ ಗ್ಯಾಂಗೊಂದು ಮಧ್ಯರಾತ್ರಿ ಬರುತ್ತಿದ್ದ ಲಾರಿಗಳಿಂದ ಡೀಸೆಲ್ ಕದಿಯುತ್ತಿದ್ದರು . ಇದೇ ವಿಚಾರಕ್ಕೆ ಲಾರಿ ಚಾಲಕರು ಮತ್ತು ಆ ಯುವಕರ ನಡುವೆ ಗಲಾಟೆಯಾಗಿತ್ತು.
ಇದೇ ವೈಷಮ್ಯದ ಹಿನ್ನೆಲೆ ನೀರು ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಗ್ಯಾಂಗ್ ಹೆದ್ದಾರಿ ಪಕ್ಕದಲ್ಲಿರುವ ಮಂಜುನಾಥ್ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಮಂಜುನಾಥ್ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತ ಮಂಜುನಾಥ್ ತಾಯಿ ಲಲಿತಮ್ಮ ಸಹ ಗಾಯಗೊಂಡಿದ್ದಾರೆ.
ಆಸ್ತಿಯ ವಿವಾದಕ್ಕೆ ಕೊಲೆ ಶಂಕೆ..?
ಮೃತ ಮಂಜುನಾಥ್ ತಂದೆ ಎರಡು ಮದುವೆಯಾಗಿದ್ದು, ತುಮಕೂರಿನ ಅರಳೂರಿನಲ್ಲಿ ಒಂದು ಸಂಸಾರ ಮತ್ತು ಹುಲುಕುಂಟೆ ಗ್ರಾಮದಲ್ಲಿ ಮತ್ತೊಂದು ಸಂಸಾರ ವಾಸವಾಗಿತ್ತು, ಮೃತ ಮಂಜುನಾಥ್ ತನ್ನ ತಾಯಿ ಜೊತೆ ಹುಲುಕುಂಟೆ ಗ್ರಾಮದಲ್ಲಿ ವಾಸವಾಗಿದ್ದ. ಎರಡು ಕುಟುಂಬ ನಡುವೆ ಆಸ್ತಿ ವಿಚಾರಕ್ಕೆ ಜಗಳವಾಗಿದ್ದು ಈ ವಿಚಾರಕ್ಕೆ ಕೊಲೆಯಾಗಿದೆ ಎಂಬ ಶಂಕೆ ಕೂಡ ಇದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಯಾಗಿ ರವಿ ಡಿ ಚನ್ನಣ್ಣನವರ್, ಡಿವೈಎಸ್ಪಿ ರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.