Tuesday, January 21, 2025

ಗಣಪತಿ ಹಬ್ಬ ಆಚರಣೆಗೆ ಸರ್ಕಾರ ಕಡಿವಾಣ ಹಾಕಿದ್ರೆ, ರಾಜ್ಯ ಸರ್ಕಾರ ಮತ್ತು ಯಡಿಯೂರಪ್ಪ ಸರ್ವನಾಶವಾಗಲಿದ್ದಾರೆ – ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ : ಯಾವ ಸಂಘಟನೆ ದೇಶ ದ್ರೋಹದ ಕೆಲಸ ಮಾಡುತ್ತೋ, ಯಾವ ಸಂಘಟನೆ ಒಂದು ಕೋಮಿನಿಂದ ಇನ್ನೊಂದು ಕೋಮಿಗೆ ಧಕ್ಕೆ ಉಂಟು ಮಾಡುತ್ತೋ ಆ ಎಲ್ಲಾ ಸಂಘಟನೆಗಳನ್ನು ಬ್ಯಾನ್ ಮಾಡುವುದು ಒಳ್ಳೆಯದು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಮಾದ್ಯಮಗಳ ಜೊತೆ ಮಾತನಾಡಿರುವ ಅವರು, ಎಸ್.ಡಿ.ಪಿ.ಐ ಸಂಘಟನೆ ನಿಷೇಧ ವಿಚಾರಕ್ಕೆ ಸಂಬಂಧಪಟ್ಟಂತೆ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಷೇಧ ಮಾಡುವುದಾದರೆ ಅಕ್ರಮ ಚಟುವಟಿಕೆ, ಶಾಂತಿ ಕದಡುವ ಯಾವುದೇ ಸಂಘಟನೆ ಇರಲಿ ಎಲ್ಲಾ ಸಂಘಟನೆಯನ್ನು ನಿಷೇಧ ಮಾಡಲಿ ಎಂದಿದ್ದಾರೆ. ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಸಂಘಟನೆಗಳು ಇಂತಹ ಚಟುವಟಿಕೆಗಳಲ್ಲಿ, ಭಾಗಿಯಾಗಿವೆ. ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ ಮಾಡಿದ್ದ ಸಂಘಟನೆ ಕೂಡ ನಿಷೇಧ ಮಾಡಲೀ. ಯಾರು, ಯಾವ ಉಡುಪು ಧರಿಸಿಕೊಳ್ಳಬೇಕೆಂಬುದು ಅವರ ವೈಯಕ್ತಿಕ ವಿಚಾರವಾಗಿದ್ದು, ಅದರಂತೆ, ಯಾರು ಎಲ್ಲಿ ಬೇಕಾದರೂ ಹೋಗಲೀ, ಈ ಸಂಘಟನೆಯವರಿಗೆ ಏಕೆ ಬೇರೆಯವರ ವಿಚಾರ ಎಂದು ಬೇಳೂರು ಪ್ರಶ್ನಿಸಿದ್ದಾರೆ. ಈ ರೀತಿ ದೇಶದಲ್ಲಿ ಪಿತೂರಿ ಮಾಡುವ, ಸಮಸ್ಯೆ ಉಂಟು ಮಾಡುವ ಎಲ್ಲಾ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಲೀ ಎಂದು ರಾಜ್ಯ ಸರ್ಕಾರದ ವಿರುದ್ಧ, ಬೇಳೂರು ತಿರುಗೇಟು ನೀಡಿದ್ದಾರೆ.

ಅದೇ ರೀತಿ, ಗಣಪತಿ ಹಬ್ಬ ಆಚರಣೆಗೆ ಸರ್ಕಾರ ಕಡಿವಾಣ ಹಾಕುವುದು ಸರಿಯಲ್ಲ ಅಂತಾ ಕೂಡ ಬೇಳೂರು ಗೋಪಾಲಕೃಷ್ಣ ಸರ್ಕಾರದ ತೀರ್ಮಾನವನ್ನು ವಿರೋಧಿಸಿದ್ದಾರೆ. ಒಂದು ವೇಳೆ ಕಡಿವಾಣ ಹಾಕಲು‌ ಮುಂದಾದರೆ ಯಡಿಯೂರಪ್ಪ ಸರ್ಕಾರ ಸರ್ವನಾಶ ಆಗಲಿದೆ ಎಂದು ಕಿಡಿ ಕಾರಿದ್ದಾರೆ. ಸರ್ಕಾರಕ್ಕೆ ಗಣಪತಿಯ ಶಾಪ ತಟ್ಟಲಿದ್ದು, ಯಡಿಯೂರಪ್ಪ ಸರ್ಕಾರ ನಾಶವಾಗಲಿದೆ ಎಂದಿದ್ದಾರೆ. ನಾನಂತೂ ಗಣಪತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಯೇ ಮಾಡುತ್ತೇನೆ. ಅದು ಯಾರು ತಡೆಯುತ್ತಾರೋ ತಡೆಯಲಿ ನೋಡೋಣ ಅಂತಾ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಗಣೇಶನನ್ನು ಹಾಗೆ ತಂದು ಹಾಗೆ ಇಟ್ಟು ಬಾವಿಯಲ್ಲಿ ಬಿಡಬೇಕೆಂದು ಹೇಳಿದೆ. ಆದರೆ, ಹಿಂದುಗಳ ಪವಿತ್ರ ಹಬ್ಬ ಗಣೇಶನ ಹಬ್ಬ ಅದನ್ನು ಹೀಗೆ ಮಾಡಿ ಹಾಗೇ ಮಾಡಿ ಎನ್ನಲು ಯಾರಿಗೂ ಅಧಿಕಾರ ಇಲ್ಲ. ಸ್ವತಂತ್ರ ಹೋರಾಟದಲ್ಲಿಯೇ ಗಣೇಶನ ಹಬ್ಬ ಆಚರಣೆ ಯಶಸ್ವಿ ಕಂಡಿದೆ. ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ ಪೂಜೆಯನ್ನು ಪ್ರಧಾನಿ ಅವರೇ ಅದ್ದೂರಿಯಾಗಿ ಮಾಡಿದ್ದಾರೆ. ಮೋದಿಯವರೇ ಹೇಳಿದ್ದಾರೆ, ಶ್ರೀ ರಾಮನ ಆಶೀರ್ವಾದದಿಂದ ಅಭಿವೃದ್ಧಿ ಹೊಂದುತ್ತೆವೆ ಎಂದು, ಹಾಗೇಯೇ, ಗಣೇಶನ ಹಬ್ಬವನ್ನು ಅದ್ಧೂರಿಯಾಗಿ ಮಾಡಿದರೆ, ಬಂದಿರುವ ಎಲ್ಲಾ ವಿಘ್ನಗಳು ದೂರವಾಗಬಹುದು. ಹೀಗಿರುವಾಗ ಗಣೇಶನ ಹಬ್ಬ ಆಚರಣೆ ಯಾಕೆ ಅದ್ದೂರಿಯಾಗಿ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೇನಾದರೂ ಸರ್ಕಾರ ಅಡಚಣೆ ಉಂಟು ಮಾಡಿದ್ರೆ, ಪ್ರಮೋದ್ ಮುತಾಲಿಕ್ ಅವರು ಹೇಳಿದ ಹಾಗೆ ನಾವು ಸುಮ್ಮನಿರಲ್ಲ. ಸರ್ಕಾರ ಅಡಚಣೆ ಉಂಟು ಮಾಡಿದ್ರೆ, ಸರ್ಕಾರ ಮತ್ತು ಯಡಿಯೂರಪ್ಪ ಸರ್ವನಾಶವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES