ವಿಜಯಪುರ : ಆ ಅಜ್ಜಿಗೆ 91 ವರ್ಷ, ಸತತ 21 ದಿನಗಳ ಕಾಲ ಕೃತಕ ಉಸಿರಾಟದ ಮೇಲೆಯೇ ಜೀವನ ಮರಣದ ನಡುವೆ ಹೊರಾಟ ನಡೆಸಿ ವಿಜಯಿಯಾದವಳು. ಅಂದ ಹಾಗೆ ಈ ಅಜ್ಜಿಗೂ ಮಹಾಮಾರಿ ಕೊರೋನಾ ವಕ್ಕರಿಸಿತ್ತು. ಕೊರೋನಾ ವಿರುದ್ದ ಜಯಿಸಿದ ಆ ಅಜ್ಜಿಯೇ ಇಂದು ಹೊಸ ಕೋವಿಡ್ ಆಸ್ಪತ್ರೆ ಉದ್ಘಾಟಿಸುವ ಭಾಗ್ಯ ಪಡೆದುಕೊಂಡಳು. ವಿಜಯಪುರ ನಗರದ 91 ವರ್ಷದ ಸೋನಬಾಯಿ ಲೋನಾರಿ ಎಂಬ ವೃದ್ದೆಗೆ 21 ದಿನಗಳ ಹಿಂದೆ ಸಾಮಾನ್ಯ ನೆಗಡಿ, ಕೆಮ್ಮಿನಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಅಜ್ಜಿಗೆ ದಮ್ಮು ಕೂಡಿಕೊಂಡ ಪರಿಣಾಮ ಉಸಿರಾಟದ ತೊಂದರೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಅಜ್ಜಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಆಗ ಆಸ್ಪತ್ರೆಯ ವೈದ್ಯರು ಈ ಕೇಸ್ ನ್ನು ಚಾಲೆಂಜ್ ಆಗಿ ಸ್ವೀಕರಿಸಿ ಅಜ್ಜಿಗೆ ಸತತ 21 ದಿನಗಳ ಕಾಲ ವೆಂಟಿಲೇಟರ್ ಮೂಲಕ ಉಸಿರಾಟ ನೀಡಿ ಅಜ್ಜಿಗೆ ಚಿಕಿತ್ಸೆ ನೀಡಿ ಅಜ್ಜಿ ಇಂದು ಗುಣಮುಖಳಾಗಿ ಓಡಾಡುವಂತೆ ಮಾಡಿದ್ದಾರೆ. ಇಂದು ಮತ್ತೊಂದು 50 ಬೆಡ್ ನ ಖಾಸಗಿ ಕೋವಿಡ್ ಆಸ್ಪತ್ರೆ ಉದ್ಘಾಟನೆ ಮಾಡುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಗೆದ್ದು ಬಂದ 91 ವಯಸ್ಸಿನ ಅಜ್ಜಿಯಿಂದಲೇ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆಗೊಳಿಸಿದರು. ಈ ಕುರಿತು ಮಾತನಾಡಿದ ಅಜ್ಜಿ ಅಂದಿನ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿ ಕೊರೋನಾ ಬಂದ್ರೆ ಅಂಜಬೇಡಿ, ಎನು ಆಗುವುದಿಲ್ಲಾ, ಡಾಕ್ಟರ್ ಹೇಳಿದ ಹಾಗೆ ಕೇಳ್ರಿ ಎಂದು ಸಲಹೆ ನೀಡಿದರು..