Friday, November 22, 2024

ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿರುವ ನರ್ಮ್ ವಸತಿ ಕಟ್ಟಡ..!

ಮೈಸೂರು: ನಾಡಿನಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ಗುಂಗಿನಲ್ಲಿ ಜನ ಮುಳುಗಿದ್ದಾರೆ. ಆದ್ರೆ ಜಿಲ್ಲೆಯ ಅಂಬೇಡ್ಕರ್ ನಗರದ ನರ್ಮ್ ಕಟ್ಟಡದಲ್ಲಿ ವಾಸ ಮಾಡುತ್ತಿರುವ ಈ ಜನ ಅಪಾಯದ ಸುಳಿಯಲ್ಲಿ ಸಿಲುಕಿದ್ದಾರೆ. ಶಿಥಿಲಗೊಂಡ ಕಟ್ಟಡದಲ್ಲಿ ವಾಸ ಮಾಡುತ್ತಿರುವ ಇವರಿಗೆ ಆತಂಕ ಶುರುವಾಗಿದೆ. ಕೂಡಲೇ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.
ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆಗಳು,ಮಳೆ ಬಂದು ಹಾಳಾದ ಮನೆಗಳು,ಯಾವಾಗ ಬೇಕಾದ್ರೂ ಕುಸಿಯುವ ಹಂತದಲ್ಲಿರುವ ಕಟ್ಟಡ. ಇದು ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ನಗರದಲ್ಲಿರುವ ನರ್ಮ್ ಯೋಜನೆಯಲ್ಲಿ ನಿರ್ಮಾಣವಾದ ವಸತಿ ಸಂಕೀರ್ಣದ ದುಃಸ್ಥಿತಿ. ಗುಡಿಸಲು ಮುಕ್ತ ನಗರ ಮಾಡುವ ಉದ್ದೇಶದಿಂದ ನರ್ಮ್ ಯೋಜನೆಯಲ್ಲಿ ವಸತಿ ಸಂಕೀರ್ಣಗಳನ್ನ ನಿರ್ಮಿಸಲಾಯಿತು. 21 ಕಟ್ಟಡಗಳಲ್ಲಿ 560 ಮನೆಗಳು ನಿರ್ಮಾಣವಾಗಿದ್ದು ಬಹುತೇಕ ಮನೆಗಳು ಫಲಾನುಭವಿಗಳಿಗೆ ಮಂಜೂರಾಗಿ ವರ್ಷಗಳು ಉರುಳಿ ಹೋದವು. ಕಳಪೆ ಗುಣಮಟ್ಟದ ಕಾಮಗಾರಿ ಹಿನ್ನಲೆ ಎರಡು ಸಂಕೀರ್ಣಗಳು ಸಂಪೂರ್ಣ ಕುಸಿಯುವ ಹಂತ ತಲುಪಿದೆ, ಕಟ್ಟಡಗಳು ಶಿಥಿಲಗೊಂಡಿದೆ. ಕಳೆದ ಮೂರು ವರ್ಷಗಳಿಂದ ಇದೇ ಸ್ಥಿತಿಯಲ್ಲಿರುವ ಮನೆಗಳಲ್ಲಿ ಈ ಜನ ವಾಸವಿದ್ದಾರೆ. ಬಿರುಕು ಬಿಟ್ಟ ಗೋಡೆಗಳು ಮತ್ತಷ್ಟು ಭೀತಿ ಹುಟ್ಟಿಸುತ್ತಿದೆ. ಶಿಥಿಲಗೊಂಡ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ.

ಸಂಭಂದಪಟ್ಟ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ. ಅಪಾಯಕ್ಕೆ ಆಹ್ವಾನ ಕೊಡುತ್ತಿರುವ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವಂತೆ ಇಲ್ಲಿನ ಜನ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಒಂದೆಡೆ ಕಟ್ಟಡ ಸಂಪೂರ್ಣ ಶಿಥಿಲವಾಗಿ ಅಪಾಯದ ಮುನ್ಸೂಚನೆ ನೀಡುತ್ತಿದ್ದರೆ ಮತ್ತೊಂದೆಡೆ ಡ್ರೈನೇಜ್ ವ್ಯವಸ್ಥೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಇಡೀ ವಾತಾವರಣವನ್ನ ಕಲುಷಿತಗೊಳಿಸಿದೆ. ದುರ್ವಾಸನೆಯಿಂದ ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ. ಕೊರೋನಾ ಮಧ್ಯೆ ಸಾಂಕ್ರಾಮಿಕ ರೋಗದ ಭೀತಿಯನ್ನೂ ಸೃಷ್ಟಿಸಿದೆ. ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕಾದ ಜವಾಬ್ದಾರಿ ಸರ್ಕಾರದ್ದು. ಆದ್ರೆ ಮೈಸೂರಿನ ಅಂಬೇಡ್ಕರ್ ನಗರದ ನರ್ಮ್ ಯೋಜನೆಯ ವಸತಿ ಸಂಕೀರ್ಣ ಅವ್ಯವಸ್ಥೆಯ ಗೂಡಾಗಿದ್ದರೂ ಅಧಿಕಾರಿಗಳಿ ಇತ್ತ ಗಮನ ಹರಿಸಿಲ್ಲ. ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.

RELATED ARTICLES

Related Articles

TRENDING ARTICLES