ಹಾಸನ : ನಮ್ಮ ಪಕ್ಷ ಹುಟ್ಟಿರೋದೆ ರೈತರ ಪರವಾಗಿ ಹೋರಾಟ ಮಾಡುವುದಕ್ಕೆ, ನನ್ನ ಅರವತ್ತು ವರ್ಷದ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು. ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಕಾನೂನುಗಳ ಪರಿಣಾಮದ ಬಗ್ಗೆ ಚರ್ಚೆ ಮಾಡಬೇಕಿದೆ. ಆಕಸ್ಮಿಕವಾಗಿ ರಾಜ್ಯಸಭೆಗೆ ಸದಸ್ಯ ನಾಗಿದ್ದೇನೆ, ಎಷ್ಟು ಸಾಧ್ಯವೊ ಅಷ್ಟು ಹೋರಾಟ ಮಾಡುತ್ತೇನೆ. ಈ ಕಾನೂನಿನ ಅಪಾಯದ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನರಿಗೆ ತಿಳಿಸಬೇಕಿದೆ.
ಮೈಸೂರು, ಮಂಡ್ಯ, ತುಮಕುರು, ಚಿಕ್ಕಬಳ್ಳಾಪುರ ಕೋಲಾರದಲ್ಲಿ ನಮ್ಮ ಶಾಸಕರಿದ್ದು ಅಲ್ಲಿ ಪರಿಣಾಮಕಾರಿ ಹೋರಾಟ ನಡೆಸಬೇಕು. ನಮ್ಮದು ಅಧಿಕೃತ ವಿರೋಧ ಪಕ್ಷ ಅಲ್ಲ, ಆದರೂ ನಾವು ಹೋರಾಟ ಮಾಡಬೇಕಿದೆ. ಇದು ದ್ವೇಷದಿಂದ ಮಾಡುತ್ತಿರೋ ಹೋರಾಟ ಅಲ್ಲ, ನಮ್ಮ ರೈತರ ಸಂಕಷ್ಟಕ್ಕೆ ನಾವು ನೆರವಾಗಬೇಕು. ರಾಜ್ಯದ 30 ಜಿಲ್ಲೆಗೂ ನಾನು ಹೋಗಿ ಹೋರಾಟ ಮಾಡುತ್ತೇನೆ, ಆಗಿರೊ ಈ ಅನ್ಯಾಯ ತಡೆಗಟ್ಟಲು ಹೋರಾಟ ಅನಿವಾರ್ಯ. ನಾನು ಕೂತುಕೊಳ್ಳೋದಿಲ್ಲ, ಈ ಹೋರಾಟ ಹಾಸನದಿಂದಲೇ ಆರಂಭಗೊಂಡಿದೆ. ಕೊರೊನಾದಿಂದ ನನಗೇನಾದ್ರು ತೊಂದರೆ ಆಗುತ್ತೆ ಎಂದು ಕೆಲವರು ಹೆದರುತ್ತಾರೆ ಆದ್ರೆ ನಾನು ಧೃತಿಗೆಡುವುದಿಲ್ಲ, ಸಾವು ಯಾವಾಗ ಹೇಗೆ ಬರುತ್ತೋ ಗೊತ್ತಿಲ್ಲ, ನಾನು ಈ ರಾಜ್ಯದಲ್ಲಿ ರೈತರ ಉಳಿವಿಗಾಗಿ ಪ್ರವಾಸ ಮಾಡುತ್ತೇನೆ.