ಶಿವಮೊಗ್ಗ : ಕಳೆದ ಮೂರು ದಿನಗಳಿಂದ ಶಿವಮೊಗ್ಗದ ಜಿ.ಪಂ. ಕಚೇರಿ ಮುಂಭಾಗ ಬಿಸಿಯೂಟ ನೌಕರರು, ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಯಾರೊಬ್ಬರು ಇವರ ದನಿ ಆಲಿಸದಂತಾಗಿದೆ. ಖುದ್ದು ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಎಸ್. ಈಶ್ವರಪ್ಪ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರೂ ಕೂಡ, ಇವರ ಕಡೆ ಮುಖ ಮಾಡಿ ಕೂಡ ನೋಡಿಲ್ಲ. ಇವರ ಕಷ್ಟ ಆಲಿಸಿಲ್ಲ. ಹೀಗಾಗಿ ಬಿಸಿಯೂಟ ನೌಕರ ಮಹಿಳೆಯರು, ಬಿಸಿಲು, ಮಳೆ ಲೆಕ್ಕಿಸದೇ, ತಮ್ಮ ಹೋರಾಟ ಮುಂದುವರೆಸಿದ್ದಾರೆ. ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಸುಮಾರು 1.17 ಲಕ್ಷ ಬಿಸಿಯೂಟ ನೌಕರರು ಕಳೆದ 19 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬಡ ಮಹಿಳೆಯರು, ವಿಧವೆಯರು, ವಿಚ್ಚೇದಿತರು ಹೆಚ್ಚಾಗಿದ್ದು, ಈ ಉದ್ಯೋಗವನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಕಳೆದ ನಾಲ್ಕೈದು ತಿಂಗಳಿಂದ ಯಾವುದೇ ಆದಾಯ ಇಲ್ಲದೇ ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನೌಕರರು ಆರೋಪಿಸಿದ್ರು. ಕೊರೋನಾದ ಹಿನ್ನಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಬಿಸಿಯೂಟವೂ ಇಲ್ಲವಾಗಿದೆ. ಕೆಲವು ಜಿಲ್ಲೆಗಳಲ್ಲಿ ನೌಕರರೇ ಆಹಾರವನ್ನು ಮಕ್ಕಳ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಶಾಲೆ ಮುಚ್ಚಿದ್ದರೂ ಶಾಲಾ ಶಿಕ್ಷಕರಿಗೆ ವೇತನ ನೀಡುತ್ತಿದೆ. ಆದರೆ ನಮಗೆ ಮಾತ್ರ ಯಾವ ವೇತನವೂ ಇಲ್ಲ. ವಿಶೇಷ ಪ್ಯಾಕೇಜ್ ಕೂಡ ಇಲ್ಲ ಎಂದು ಆರೋಪಿಸಿದರು. ಬಿಸಿಯೂಟ ನೌಕರರಿಗೆ ಶಾಲೆ ಆರಂಭವಾಗುವವರೆಗೂ ವೇತನ ನೀಡಬೇಕು, ಕನಿಷ್ಟ 6 ತಿಂಗಳಿಗೆ ಆಗುವಷ್ಟು ಪಡಿತರ ಒದಗಿಸಬೇಕು, ಲಾಕ್‍ಡೌನ್ ಅವಧಿಯಲ್ಲಿ ತಿಂಗಳಿಗೆ 7 ವರೆ ಸಾವಿರದಂತೆ ವೇತನ ನೀಡಬೇಕು, ಪೆನ್ಷನ್ ನೀಡಬೇಕು. ಅಕಸ್ಮಾತ್ ಕೋವಿಡ್ ಸೋಂಕಿತರಾದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಮತ್ತು ನಮ್ಮನ್ನು ಖಾಯಂಗೊಳಿಸಬೇಕು ಎಂದು ಬಿಸಿಯೂಟ ನೌಕರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಈ ಕಷ್ಟ ಜೀವಿ ಮಹಿಳೆಯ ಕಷ್ಟವನ್ನು ಸಚಿವರು ಆಲಿಸುತ್ತಾರಾ ಕಾದು ನೋಡಬೇಕಿದೆ.