ಮಂಗಳೂರು: ಕೊರೋನಾ ಕಾರಣದಿಂದ ಈ ಬಾರಿಯ ಚೌತಿ ಹಬ್ಬವು ಕಬ್ಬು ಬೆಳೆಗಾರರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರುತ್ತಿದ್ದರೂ, ಕರಾವಳಿಯ ಕಬ್ಬು ಬೆಳೆಗಾರರು ಮಾತ್ರ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕರಾವಳಿ ಜಿಲ್ಲೆಗಳಿಗೆ ಕಬ್ಬು ಪೂರೈಕೆ ಮಾಡೋ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಳ್ಕುಂಜೆ ಗ್ರಾಮದ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ. ಕೊವಿಡ್-19 ಇವರ ಈ ಕೃಷಿ ಬದುಕಿಗೂ ಕೊಳ್ಳಿ ಇಟ್ಟಿದೆ. ಕಳೆದ 9 ತಿಂಗಳಿನಿಂದ ಪರಿಶ್ರಮಪಟ್ಟು ಬೆಳೆಸಿದ ಕಬ್ಬು ಚೆನ್ನಾಗಿ ಫಸಲು ಬಂದರೂ, ಅದರ ಖರೀದಿಗೆ ಯಾರೊಬ್ಬ ಮಧ್ಯವರ್ತಿಯೂ ಮುಂದಾಗಿಲ್ಲ. ಪರಿಣಾಮ, ಎಕ್ರೆಗಟ್ಟಲೆ ಜಾಗದಲ್ಲಿ ಬೆಳೆದ ಸಿಹಿಯಾದ ಕಬ್ಬುಗಳು ಈ ಬಾರಿ ಮಾರುಕಟ್ಟೆ ಸೇರುತ್ತೋ, ಇಲ್ಲವೋ ಅನ್ನೋ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಂದಹಾಗೆ ಈ ಬಳ್ಕುಂಜೆ ಗ್ರಾಮ ಕರಾವಳಿ ಜಿಲ್ಲೆಗಳಲ್ಲಿಯೆ ಅತೀ ಹೆಚ್ಚು ಕಬ್ಬು ಬೆಳೆಯುವ ಗ್ರಾಮವಾಗಿದೆ. ಸುಮಾರು 45 ಕುಟುಂಬಗಳು ಈ ಕಬ್ಬು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದು, ಈ ಬಾರಿ ಅದೆಲ್ಲವೂ ಕೈಕೊಟ್ಟಿದೆ. ಚೌತಿ ಹಾಗೂ ಕ್ರೈಸ್ತರ ತೆನೆ ಹಬ್ಬಕ್ಕಾಗಿಯೇ ಬೆಳೆಯುವ ಈ ಕಬ್ಬು ಕೃಷಿಯನ್ನ ನಂಬಿ ಬೆಳೆಗಾರರು ಚಿನ್ನಾಭರಣ ಅಡವಿಟ್ಟು ಬೆಳೆಸಿರುತ್ತಾರೆ. ಆದರೆ ಕೊರೋನಾ ಸಂದಿಗ್ಧತೆಯಿಂದ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿದೆ. ಸುಮಾರು 15 ಎಕ್ರೆ ಜಾಗದಲ್ಲಿ 3 ಲಕ್ಷಕ್ಕೂ ಅಧಿಕ ಕಬ್ಬು ಬೆಳೆದಿದ್ದು, ಸರಕಾರ ಮಾರಾಟ ಮಾಡಲು ಸೂಕ್ತ ಮಾರ್ಗಸೂಚಿ ನೀಡುವಂತೆಯೂ ಒತ್ತಾಯಿಸಿದ್ದಾರೆ.
-ಇರ್ಷಾದ್ ಕಿನ್ನಿಗೋಳಿ