Tuesday, January 21, 2025

ಕೊರೋನಾ ಎಫೆಕ್ಟ್ : ಕೃಷಿಯಲ್ಲಿ ತೊಡಗಿದ 2ಕೆ ಕಿಡ್ಸ್

ವಿಜಯಪುರ: ಕೊರೋನಾ ಮಾನವನಿಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಿದ್ದರೂ, ಹಲವಾರು ಬಗೆಯಲ್ಲಿ ಪಾಠವನ್ನೂ ಕೊರೋನಾ ಹೇಳಿ ಕೊಡುತ್ತಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಕೃಷಿಯತ್ತ ಆಸಕ್ತಿ ತೋರುವಂತೆ ಮಾಡಿದೆ. ಪ್ರತಿ ಬಾರಿ ಮುಂಗಾರು ಆರಂಭವಾಗುತ್ತಿದ್ದಂತೆ ಶಾಲೆ, ಕಾಲೇಜುಗಳು ಪ್ರಾರಂಭವಾಗುತ್ತಿದ್ದವು. ಆದರೆ, ಈ ಬಾರಿ ಕೊರೋನಾ ಕಾಟದಿಂದಾಗಿ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇದು ವಿದ್ಯಾರ್ಥಿಗಳ ಪಾಲಿಗಂತೂ ಮನೆಯಲ್ಲಿಯೇ ಇರುವಂತೆ ಮಾಡಿದೆ. ಆದರೆ, ಮನೆಯಲ್ಲಿಯೇ ಕುಳಿತುಕೊಳ್ಳಲು ಕೂಡ ಇವರಿಗೆ ಬೇಸರವಾಗುತ್ತಿದ್ದ ಪರಿಣಾಮ ಈಗ ಮುಂಗಾರು ಆರಂಭವಾಗಿದ್ದರಿಂದ ಬಸವನಾಡು ವಿಜಯಪುರದಲ್ಲಿ ವಿದ್ಯಾರ್ಥಿಗಳು ಪಾಲಕರೊಂದಿಗೆ ಕೃಷಿಯಲ್ಲಿ ತೊಡಗಿದ್ದಾರೆ.

ಮುಂಗಾರು ಮಳೆಯಾದ ಪರಿಣಾಮ ಭೂಮಿ ಹದವಾಗಿದ್ದು, ನೇಗಿಲು ಹೊಡೆಯುವುದು, ಮಣ್ಣನ್ನು ಹರಗುವುದು, ಕಳೆ ಕೀಳುವುದು ಮತ್ತು ಬಿತ್ತನೆಯಂಥ ಚಟುವಟಿಕೆಗಳತ್ತ ಈಗ ಈ ಮಕ್ಕಳು ಮತ್ತು ವಿದ್ಯಾರ್ಥಿಗಳು ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಕೊರೋನಾದಿಂದಾಗಿ ಆರ್ಥಿಕ ವ್ಯವಸ್ಥೆ ಕುಸಿದಿದೆ. ಹಲವಾರು ಉದ್ಯಮಗಳು ನೆಲ ಕಚ್ಚಿವೆ. ಸಾವಿರಾರು ಜನ ನಿರುದ್ಯೋಗಿಗಳಾಗಿದ್ದಾರೆ. ದೊಡ್ಡ ಕನಸುಗಳನ್ನು ಹೊತ್ತು ಮಹಾನಗರಗಳತ್ತ ಮುಖ ಮಾಡುತ್ತಿದ್ದ ಜನ ಈಗ ಕೆಲಸ ಕಳೆದುಕೊಂಡು ತಾಯ್ನಾಡಿಗೆ ಮರಳಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಕೃಷಿಯ ಪಾಠವನ್ನು ಕಲಿಯುತ್ತಿರುವುದು ಅಚ್ಚರಿಯ ಸಂಗತಿ.

RELATED ARTICLES

Related Articles

TRENDING ARTICLES