ಮಂಗಳೂರು : ಬೆಂಗಳೂರಿನ ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ SDPI ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ, ಗಲಭೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಅಂತಾ ಆರೋಪಿಸಿದ್ದಾರೆ. ಗಲಭೆ ಹಿನ್ನೆಲೆ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ ವೀಡಿಯೋ ಸಂದೇಶದಲ್ಲಿ ಮಾತನಾಡಿದ ಅವರು, ನವೀನ್ ಎಂಬಾತ ಪ್ರವಾದಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದ. ಈ ಸಂಬಂಧ ಸ್ಥಳೀಯ ಯುವಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ನವೀನ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸೋದರ ಅಳಿಯ ಎಂಬ ಕಾರಣಕ್ಕೆ ಸ್ಥಳಿಯ ಪೊಲೀಸರು ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದ ಪರಿಣಾಮ ಈ ಅಹಿತಕರ ಘಟನೆ ನಡೆದಿದೆ ಎಂದು ಅವರು ಆರೋಪಿಸಿದರು. ನವೀನ್ ಎಂಬಾತ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದ ಪೋಸ್ಟ್‌ನಿಂದ ಸ್ಥಳೀಯರು ಆಕ್ರೋಶಭರಿತರಾಗಿದ್ದರು. ಅಲ್ಲದೆ, ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಆರೋಪಿಯ ಬಂಧನಕ್ಕೆ ಕ್ರಮ ವಹಿಸದೇ ನಿರ್ಲಕ್ಷ ವಹಿಸುವುದನ್ನು ಗಮನಿಸಿ ರೊಚ್ಚಿಗೆದ್ದ ಪರಿಣಾಮ ಈ ಘಟನೆ ನಡೆದಿದೆ. ಈ ಅಹಿತಕರ ಘಟನೆಗೆ ಹಾಗೂ ಮೂರು ಜೀವ ಬಲಿಯಾಗಲು ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಆರೋಪಿಸಿದ್ದಾರೆ.
ಪೊಲೀಸರ ಜೊತೆಗೂಡಿ ಜನರನ್ನು ಸಮಾಧಾನ ಪಡಿಸಲು ಸ್ಥಳಕ್ಕೆ ತೆರಳಿದ್ದ ಎಸ್‌ಡಿಪಿಐ ಮುಖಂಡ ಮುಝಮ್ಮಿಲ್ ಪಾಷಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಪೊಲೀಸರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕುವ ಯತ್ನ ಎಂದಿರುವ ಅವರು, ಮಾಮೂಲಿಯಂತೆ ಎಸ್‌ಡಿಪಿಐಯನ್ನು ಗಲಭೆಗೆ ಎಳೆದು ತರುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು