ಹಾಸನ : ಹೇಮಾವತಿ ಅಣೆಕಟ್ಟೆ ತುಂಬುತ್ತಿದ್ದು ರೈತರಿಗೆ ಅನುಕೂಲವಾಗುವಂತೆ ಬಲದಂಡೆ ನಾಲೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ, ಬಲದಂಡೆ ನಾಲೆಗೆ ನೀರು ಹರಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಸ್.ಪಿ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ರಾಜಕಾರಣಿಗಳು ಯಾರೂ ಒತ್ತಡ ಹಾಕುವ ಪ್ರಶ್ನೆ ಇಲ್ಲ. ನಿರ್ಭಯವಾಗಿ ಕೆಲಸಮಾಡಿ. ಕಾನೂನು ಪ್ರಕಾರ ಏನು ಕೆಲಸ ಮಾಡಬೇಕೋ ಅದನ್ನು ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಪಿಎಸ್‍ಐ ಕಿರಣ ಕುಮಾರ್ ಆತ್ಮಹತ್ಯೆ ಪ್ರಕರಣ ಎಸ್‍ಪಿ ನೇತೃತ್ವದಲ್ಲಿ ತನಿಖೆಯಾಗುತ್ತಿದ್ದು, ತನಿಖೆ ನಂತರ ಅದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಇದರಿಂದ ಹತಾಶೆಗೊಂಡ ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ಮಾಡುತ್ತಿವೆ, ಬೆಂಗಳೂರಿನ ಘಟನೆ ಪೂರ್ವ ನಿಯೋಜಿತ ಗಲಭೆಯಂತೆ ಕಾಣುತ್ತಿದೆ ಎಂದು ಸಚಿವ ಗೋಪಾಲಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿಯುತವಾಗಿ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿಲ್ಲ. ಗೃಹ ಸಚಿವರಿಗೆ ದಕ್ಷತೆಯಿದ್ದು ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸಂಘಟನೆಗಳ ಸದಸ್ಯರ ಕೈವಾಡ ಇರುವ ಬಗ್ಗೆ ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಆದರೆ ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸಮುದಾಯದ ಮೇಲೆ ಗಲಾಟೆ ಆಗಿಲ್ಲ. ಕೆಲವು ದುಷ್ಟ ಶಕ್ತಿಗಳು ಸರ್ಕಾಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಪರಿಸ್ಥಿತಿಯನ್ನು ಸಮರ್ಥವಾಗಿ ಗೃಹ ಸಚಿವರು ನಿಭಾಯಿಸುತ್ತಾರೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
– ಪ್ರತಾಪ್ ಹಿರೀಸಾವೆ