ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದ್ವೇಷದ ರಾಜಕೀಯಕ್ಕೆ ಇಳಿದಿದೆಯಾ ಎಂಬ ಅನುಮಾನಗಳು ಜಿಲ್ಲೆಯ ಜನರನ್ನು ಕಾಡುತ್ತಿವೆ. ಯಾಕಂದ್ರೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಂಜೂರಾಗಿದ್ದ ಕಾಲೇಜುಗಳನ್ನು ಈಗಿನ ಸರ್ಕಾರ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಸ್ಥಳಾಂತರಿಸುತ್ತಿರುವುದು ಈ ಎಲ್ಲಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಆಳುವ ಸರ್ಕಾರದ ವಿರುದ್ಧ ಸೆಟೆದು ನಿಂತಿರುವ ಚಳ್ಳಕೆರೆ ಕಾಂಗ್ರೆಸ್ ಶಾಸಕ ರಘುಮೂರ್ತಿ ಸವಾಲು ಹಾಕಿ ಹೋರಾಟಕ್ಕಿಳಿದಿದ್ದು, ಕೊವಿಡ್19 ಹೆಸರಿನಲ್ಲಿ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆದಿದೆ.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತುರುವನೂರು ಹೋಬಳಿ ಕೇಂದ್ರಕ್ಕೆ ಪದವಿ ಕಾಲೇಜು ಮಂಜೂರು ಮಾಡಲಾಗಿತ್ತು. ಆ ನಂತರ ಬಂದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿವೇಶನದ ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೂಡ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ, ಸದ್ಯ ಕಾಲೇಜಿನಲ್ಲಿ 57 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈ ವರ್ಷ ಕೂಡ ನೂರು ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಈ ನಡುವೆ ರಾಜ್ಯ ಸರ್ಕಾರ ತುರುವನೂರು ಕಾಲೇಜನ್ನು ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ನಾನು ಕಾಲೇಜು ಉಳಿಸುವುದಕ್ಕಾಗಿ ಎಂತಹದ್ದೇ ತ್ಯಾಗ ಬಲಿದಾನಕ್ಕೂ ಸಿದ್ದ, ನನ್ನ ಶಾಸಕ ಸ್ಥಾನ ಹೋದರೂ ಸರಿ, ಕಾಲೇಜು ಉಳಿಸದಿದ್ದರೆ ಶಾಸಕನಾಗಿ ಉಳಿಯುವುದಿಲ್ಲ ಎಂಬ ಧೃಢ ನಿಲುವು ವ್ಯಕ್ತ ಪಡಿಸಿದ್ದಾರೆ ಶಾಸಕ ರಘುಮೂರ್ತಿ.
ನನ್ನನ್ನು ಜೈಲಿಗೆ ಹಾಕಿದರೂ ಸರಿ ಹೊರಾಟವನ್ನು ಕೈಬಿಡುವುದಿಲ್ಲ, ಇವರು ಏನೇ ಪ್ರಯತ್ನ ಮಾಡಿದರೂ ಕಾಲೇಜು ಸ್ಥಳಾಂತರ ಪ್ರಕ್ರಿಯೆ ಕೈಬಿಡುವ ತನಕ ಅಮರಣಾಂತ ಉಪವಾಸ ಸೇರಿದಂತೆ ಎಲ್ಲಾ ರೀತಿಯ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.