ಚಿಕ್ಕಮಗಳೂರು: ಸ್ಥಳೀಯರು ಅಸ್ವಸ್ಥಗೊಂಡಿದ್ದ ಭಾರಿ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿ, ಅದಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲ್ಲೂಕಿನ, ಬಾಳೆಹೊನ್ನೂರು ಸಮೀಪ ಹುಯಿಗೆರಿ ಗ್ರಾಮದ ಸಮೀಪದ ರಸ್ತೆಯಲ್ಲಿ, ಹೆಬ್ಬಾವು ಗಾಯಗೊಂಡು ಅಸ್ವಸ್ಥ ಸ್ಥಿತಿಯಲ್ಲಿ ಸಾವು ಬದುಕಿನೊಡನೆ ಹೋರಾಡುತ್ತಿತ್ತು.
ಈ ಕುರಿತು ಸ್ಥಳೀಯರು ಬಾಳೆಹೊನ್ನೂರು ಅರಣ್ಯ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಮಸಿ ಗದ್ದೆಯ ಉರಗ ತಜ್ಞ ಪೀಟರ್ ಕರೆಸಿ ಸಮಾರು 16 ಅಡಿಯ ಉದ್ದದ ಬಾರೀ ಗಾತ್ರದ ಹೆಬ್ಬಾವುನ್ನು ರಕ್ಷಿಸಿ, ಬಾಳೆಹೊನ್ನೂರಿನ ಪಶು ವೈದ್ಯ ಆಸ್ಪತ್ರೆಗೆ ತೆಗೆದು ಕೊಂಡು ಹೋಗಿದ್ದಾರೆ. ಪಶು ವೈದ್ಯ ಅಧಿಕಾರಿ ಡಾ.ನಿದಾರವರಿಂದ ಚಿಕಿತ್ಸೆ ನೀಡಿದ್ದಾರೆ. ಈ ಹೆಬ್ಬಾವಿಗೆ ಸರಿಯಾಗಿ ಆಹಾರ ಸಿಗದೆ, ಗಾಯಗೊಂಡು ಸಂಪೂರ್ಣವಾಗಿ ನಿತ್ರಾಣಗೊಂಡು, ಬಡಕಲು ಆಗಿತ್ತು. ಆಸ್ಪತ್ರೆಯ ವೈದ್ಯರು ಹೆಬ್ಬಾವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಡ್ರಿಪ್ಸ್ ಹಾಕಿ ಹಾರೈಕೆ ಮಾಡಿದ್ದಾರೆ ನಂತರ ಸ್ವಲ್ಪ ಪ್ರಮಾಣದಲ್ಲಿ ಈ ಹೆಬ್ಬಾವಿನಲ್ಲಿ ಚೇತರಿಕೆ ಕಂಡ ಹಿನ್ನಲೆಯಲ್ಲಿ, ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಭದ್ರಾ ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ.
-ಸಚಿನ್ ಶೆಟ್ಟಿ