ಶಿವಮೊಗ್ಗ: ಕಾರ್ಪೋರೇಟ್ ಕಂಪೆನಿಗಳೇ ಕೃಷಿ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ರೈತರು ಇಂದು ಪ್ರತಿಭಟನೆ ನಡೆಸಿದ್ದಾರೆ. ಇಂದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರೈತರು, ಈ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ರು. ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶವನ್ನೇ ಖಾಸಗಿ ಬಂಡವಾಳದಾರರಿಗೆ, ಕಾರ್ಪೋರೇಟ್ ಕಂಪೆನಿಗಳಿಗೆ ಒತ್ತೆ ಇಟ್ಟು ದೇಶದ ಜನರನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ರು. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳು ಜಾರಿಗೆ ತಂದಿದೆ. ರೈತರ ಭೂಮಿಯನ್ನು ಕಸಿದುಕೊಂಡು ಹೊರದಬ್ಬುವ ಕೆಲಸವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ರು.
ಕೃಷಿ ಭೂಮಿ ಕೃಷಿಗೆ ಮಾತ್ರ ಬಳಕೆಯಾಗಬೇಕು. ವ್ಯವಹಾರಿಕ ಉದ್ದೇಶಗಳಿಗೆ ಬಳಕೆಯಾಗಬಾರದು ಎಂಬ ಕಾರಣದಿಂದ ಭೂಮಿಯನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದೆಂದು ಭಾವಿಸಿ ರೈತನಿಗೆ ಭೂಮಿಯ ರಕ್ಷಣೆ ಮಾಡುವಲ್ಲಿ ಹೆಚ್ಚಿನ ಅಧಿಕಾರ ನೀಡಲಾಗಿತ್ತು. ರಾಜ್ಯ ಸರ್ಕಾರ ಈ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ರೈತರನ್ನು ಒಕ್ಕಲತನದಿಂದ ಹೊರಹಾಕಿ ಖಾಸಗಿ ಕಂಪೆನಿಗಳಿಗೆ ಮತ್ತು ಬಂಡವಾಳದಾರರಿಗೆ ಕೃಷಿ ಭೂಮಿಯನ್ನು ವರ್ಗಾಯಿಸುವ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಈ ಭೂಮಿ ನಮ್ಮದು, ಈ ಭೂಮಿಯನ್ನು ಮುಟ್ಟಲು ಯಾರಿಗೂ ಬಿಡುವುದಿಲ್ಲ. ಮುಟ್ಟಿದರೆ ಸುಮ್ಮನೆ ಕೂರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೇಂದ್ರ ಸರ್ಕಾರ, ವಿದ್ಯುಚ್ಚಕ್ತಿ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗಿಯವರಿಗೆ ವಹಿಸಲು ಸುಗ್ರಿವಾಜ್ಞೆ ಹೊರಡಿಸಿರುವುದರಿಂದ ರೈತರು ಪಂಪ್ ಸೆಟ್ ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲುತ್ತದೆ.
ರೈತರು ಕೃಷಿ ಮಾಡಲು ಕಷ್ಟಗಳನ್ನು ಸೃಷ್ಟಿಸಿ ಒಕ್ಕಲುತನದಿಂದ ಹೊರಹಾಕಿ ಕೃಷಿಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ವಹಿಸುವ ವ್ಯವಸ್ಥೇ ಕೇಂದ್ರ ಸರ್ಕಾರ ಸೃಷ್ಟಿಸುತ್ತಿದೆ ಎಂದು ವಿರೋಧಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಿ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸಿ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ವಹಿಸುವ ವ್ಯವಸ್ಥೆಯಾಗಿದೆ ಎಂದು ದೂರಿದ್ದಾರೆ. ಅಗತ್ಯ ವಸ್ತು ಕಾಯ್ದೆಯಿಂದ ಅನೇಕ ಉತ್ಪನ್ನವನ್ನು ಎಂಎಸ್‍ಪಿಯಿಂದ ಕೈಬಿಡಲಾಗಿದೆ ಮತ್ತು ಕಂಪೆನಿಗಳು ಮಾಡುವ ದಾಸ್ತಾನು ಮಾರುಕಟ್ಟೆ ಸರಕಾಗಿದೆ ಎಂದು ವಿರೋಧಿಸಿ ಪ್ರತಿಭಟನಾಕಾರರು, ಎಲ್ಲ ಕಾಯ್ದೆಗಳನ್ನು ರದ್ದು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.