ಹಾಸನ : ಕೊರೋನಾ ಆತಂಕದ ನಡುವೆ ಒಮ್ಮೆ ಮುಂದೂಡಿ ನಂತರ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಹೊರ ಬಿದ್ದಿದೆ. ಕೊರೋನಾ ಆತಂಕದಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಿಕ್ಕ ಅವಕಾಶದಲ್ಲಿ ಉತ್ತಮ ಸಾಧನೆ ಮಾಡಿರುವುದು ಗಮನಾರ್ಹ. ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಸಮಾನ ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ನಗರದ ರಾಯಲ್ ಅಪೊಲೊ ಇಂಟರ್ ನ್ಯಾಷಿನಲ್ ಸ್ಕೂಲ್ ವಿದ್ಯಾರ್ಥಿ ಶ್ರೀತೇಜ್ ಭಟ್ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದರೆ, ಹಿಂದಿ, ಗಣಿತ,ಸಮಾಜ ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಉಳಿದಂತೆ ಇಂಗ್ಲಿಷ್ ಮತ್ತು ವಿಜ್ಞಾನ ವಿಷಯದಲ್ಲಿ ತಲಾ 99 ಅಂಕ ಪಡೆದಿದ್ದಾರೆ. ಎಲ್ಲಾ ವಿಭಾಗಗಳಲ್ಲೂ ‘ಎ’ ಶ್ರೇಣಿ ಪಡೆದಿರುವ ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ. ಇದೇ ರೀತಿ ಚನ್ನರಾಯಪಟ್ಟಣ ತಾಲ್ಲೂಕು ಕಬ್ಬಳಿ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿ ದೀಪಕ್ ಎಂ.ಎಸ್. ಇದೇ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಬೂತನೂರು ಕಾವಲು ಮಲೆನಾಡು ಒಲಂಪಿಯಾಡ್ ಪ್ರೌಢಶಾಲೆಯ ಹರ್ಷ ಎನ್.ಕೌಂಡಿನ್ಯ ಸಹ ಇದೇ ಸಾಧನೆ ಮಾಡಿದ್ದು, ಕನ್ನಡದಲ್ಲಿ 125, ಹಿಂದಿ 100, ಇಂಗ್ಲಿಷ್ 100, ಸಮಾಜ ವಿಜ್ಞಾನ 100, ಗಣಿತ 99 ಮತ್ತು ವಿಜ್ಞಾನ ವಿಷಯದಲ್ಲಿ 99 ಅಂಕ ಪಡೆದಿದ್ದಾನೆ ಮತ್ತು ಹಾಸನದ ಯುನೈಡೆಟ್ ಶಾಲೆಯ ಪೂರ್ಣಚಂದ್ರ ಅವರೂ 625 ಕ್ಕೆ 623 ಅಂಕ ಪಡೆದು ಮೇರು ಸಾಧನೆ ಮಾಡಿದ್ದಾರೆ.
ಪ್ರತಾಪ್ ಹಿರೀಸಾವೆ