ಹಾಸನ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ಆಹಾರ ಬೆಳೆಯಾಗಿದ್ದ ಮೆಕ್ಕೆಜೋಳಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯೊಂದರಲ್ಲೇ ಹತ್ತಿರ ಮೂರು ಸಾವಿರ ಹೆಕ್ಟೇರ್ ನಲ್ಲಿ ಬೆಳೆಯಲಾಗಿದ್ದು ಮೆಕ್ಕೆಜೋಳ ಬೆಲೆ ಮಣ್ಣು ಪಾಲಾಗಿದೆ. ಸಕಲೇಶಪುರ ತಾಲೂಕಿನಲ್ಲಿ ಅತಿ ಹೆಚ್ಚು ಭತ್ತದ ಬೆಳೆಗೆ ಹಾನಿಯಾಗಿದ್ದರೆ ಉಳಿದ ತಾಲೂಕುಗಳಲ್ಲಿ ಇನ್ನೇನು ಕಟಾವಿಗೆ ಬರಬೇಕಿದ್ದ ಮೆಕ್ಕೆಜೋಳ ಧರಾಶಾಹಿಯಾಗಿದೆ. ಆಲೂರು ತಾಲೂಕೊಂದರಲ್ಲೇ 1 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಜೋಳದ ಬೆಳೆ ನೆಲಕ್ಕೆ ಬಿದ್ದಿದ್ದು, ಉಳಿದಂತೆ ಹಾಸನ ತಾಲೂಕಿನಲ್ಲಿ 500 ಹೆಕ್ಟೇರ್ ಗಿಂತ ಅಧಿಕ, ಅರಕಲಗೂಡು ತಾಲೂಕಿನಲ್ಲಿ 700 ಹೆಕ್ಟೇರ್, ಬೇಲೂರು ತಾಲೂಕಿನಲ್ಲಿ 400 ಹೆಕ್ಟೇರ್ ಮುಸುಕಿನ ಜೋಳ ಮಕಾಡೆ ಮಲಗಿದೆ.
ಈ ಪೈಕಿ ಆಲೂರು ಪಟ್ಟಣದ ರೈತ ಕಿರಣ್ ಎಂಬುವವರು ಪತ್ನಿಯ ಒಡವೆ ಅಡವಿಟ್ಟು ಎಂಟು ಎಕರೆ ಪ್ರದೇಶಕ್ಕೆ ಸುಮಾರು 12 ಬ್ಯಾಗ್ ಜೋಳ ಬಿತ್ತನೆ ಮಾಡಿದ್ದರು. ಅಂದುಕೊಂಡಂತೆ ಜೋಳ ಹುಲುಸಾಗಿ ಬೆಳೆದಿತ್ತು.
ತುಂಬಾ ಚೆನ್ನಾಗಿ ಬೆಳೆದಿದ್ದ ಒಂದೂವರೆ ತಿಂಗಳ ಬೆಳೆ ಇನ್ನೇನು ಕೈಗೂಡಲಿದೆ. ಈ ಮೂಲಕ ಸಾಲದ ಸಂಕಷ್ಟ ದೂರವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಡ ಕುಟುಂಬಕ್ಕೆ ಹುಚ್ಚು ಮಳೆ ಮರ್ಮಾಘಾತ ನೀಡಿದೆ.
ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಇಡೀ ಫಸಲು ನೆಲಕಚ್ಚಿದೆ. ಒಂದೂವರೆ ಲಕ್ಷ ಖರ್ಚು ಮಾಡಿದ್ದ ಬೆಳೆ ಕೈಸೇರಿದ್ದರೆ ಲಕ್ಷಾಂತರ ರೂ ಆದಾಯ ಬರುತ್ತಿತ್ತು. ಈಗ ಆದಾಯದ ಆಸೆ ಇಡಿಯಾಗಿ ಮಣ್ಣು ಪಾಲಾಗಿದೆ ಎಂದು ಬಡ ರೈತ ಕಣ್ಣೀರಿಡುತ್ತಿದ್ದಾರೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ಕಿರಣ್ ದಂಪತಿ ಅರಕಲಗೂಡಿಗೆ ತೆರಳಿದ್ದರು. ಅಲ್ಲಿಂದ ಮರಳಿ ಬರುವ ವೇಳೆಗೆ ಇದು ನಾವು ಬೆಳೆದಿದ್ದ ಬೆಳೆಯೇ ಎಂಬ ಅನುಮಾನ ಬರುವ ರೀತಿಯಲ್ಲಿ ಮೆಕ್ಕೆಜೋಳ ನೆಲ ಕಚ್ಚಿದೆ.
ಒಡವೆ ಅಡವಿಟ್ಟು ಬೆಳೆ ಮಾಡಿದ್ದೆವು. ಆರಂಭದಲ್ಲಿ ಮಳೆ ಕೈಕೊಟ್ಟಾಗ ಒಂದೂವರೆ ಕಿಮೀ ದೂರದಿಂದ ಕಷ್ಟಪಟ್ಟು ನೀರು ಹರಿಸಿ ಒಣಗುತ್ತಿದ್ದ ಬೆಳೆ ಕಾಪಾಡಿಕೊಂಡಿದ್ದೆವು. ಇನ್ನೇನು ನಾವು ಹಾಕಿದ ಪರಿಶ್ರಮಕ್ಕೆ ಫಲ ಸಿಗಲಿದೆ ಎನ್ನುವಷ್ಟರಲ್ಲಿ ಹೀಗಾಗಿದೆ ಎಂದು ರೈತ ದಂಪತಿ ರೋದಿಸುತ್ತಿದ್ದಾರೆ. ಮಾಡಿದ್ದ ಬೆಳೆ ಬಹುತೇಕ ನಾಶವಾಗಿರುವುದರಿಂದ ಸಂಘದಲ್ಲಿ ಪಡೆದಿರುವ ಸಾಲವನ್ನು ಮರುಪಾವತಿ ಮಾಡುವುದು ಹೇಗೆ? ಒಡವೆಗೆ ಬಡ್ಡಿ ಕಟ್ಟುವುದು ಹೇಗೆ ಎಂಬ ದೊಡ್ಡ ಚಿಂತನೆ ಬಿದ್ದಿದ್ದಾರೆ. ಇದೀಗ ಸರ್ಕಾರದತ್ತ ನೆರವಿವಾಗಿ ನಿರೀಕ್ಷೆಯ ಕಣ್ಣುಗಳಿಂದ ಕಾಯುತ್ತಿದ್ದಾರೆ.
ಪ್ರತಾಪ್ ಹಿರೀಸಾವೆ