ಯಾದಗಿರಿ: ‘ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಗಡಿನಾಡು ಜಿಲ್ಲೆ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗ್ತಿದ್ದರಿಂದ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯಿರುವ ಬಸವಸಾಗರ ಜಲಾಶಾಯಕ್ಕೆ ಎರಡು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಮಧ್ಯೆ ನೂರಕ್ಕೂ ಅಧಿಕ ಕುರಿಗಳೊಂದಿಗೆ ಕೃಷ್ಣಾ ನದಿಗೆ ಇಳಿದ್ದಿದ್ದ ಕುರಿಗಾಹಿ ಟೋಪಣ್ಣ ಎಂಬಾತ ನದಿಯ ನಡು ಗಡ್ಡೆಯಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಅಂಗಲಾಚುತ್ತಿದ್ದಾನೆ.
ಸದ್ಯ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ, ಶಾಸಕ ರಾಜುಗೌಡ, ತಹಶಿಲ್ದಾರ್, ಪೊಲೀಸರು ಭೇಟಿ ನೀಡಿದ್ದು, ಡ್ರೋನ್ ಕ್ಯಾಮರಾದ ಮೂಲಕ ಕುರಿಗಾಹಿ ಇರುವ ಸ್ಥಳವನ್ನ ಪತ್ತೆಹಚ್ಚಲಾಗಿದೆ. ಪ್ರವಾಹ ಇಳಿಮುಖವಾಗುತ್ತಿರುವದಿಂದ ಬೋಟ್ ಮೂಲಕ ಕುರಿಗಾಹಿ ರಕ್ಷಣೆಗೆ ಕಾರ್ಯಾಚರಣೆ ಶುರು ಮಾಡಿದ್ದಾರೆ. ನಿನ್ನೆ ಕೃಷ್ಣಾ ನದಿಯ ನಡುಗಡ್ಡೆಗೆ ಕುರಿಗಳನ್ನ ಮೇಯಿಸಲು ತೆರಳಿದ್ದಾಗ, ಏಕಾಏಕಿ ಪ್ರವಾಹ ಉಂಟಾಗಿ ನಡುಗಡ್ಡೆಯಲ್ಲಿ ಅನ್ನ ನೀರಿಲ್ಲದೇ ಸಿಲುಕಿಕೊಂಡಿದ್ದ.