ಮೈಸೂರು : 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಹೃದಯಾಘಾತಕ್ಕೊಳಗಾಗಿದ್ದ ವೃದ್ಧೆಗೆ ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ದೊರೆಯದೆ ಕಾರಿನಲ್ಲೇ ಸಾವನ್ನಪ್ಪಿದ ಮನಕಲುಕುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆಗೆ ಜಲಾಶಯದ ಅಧಿಕಾರಿಗಳು ಸ್ಪಂದಿಸದಿದ್ದರಿಂದ ಕೊನೆಯುಸಿರೆಳೆದಿದ್ದಾರೆ.
ಬಿದರಳ್ಳಿ ಗ್ರಾಮದ ವೃದ್ಧೆ ಸೌಭಾಗ್ಯ(60) ಮೃತ ದುರ್ದೈವಿಯಾಗಿದ್ದಾರೆ. ಕಬಿನಿ ಡ್ಯಾಂ ನ ಮೇಲ್ಭಾಗದ ರಸ್ತೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬ ಸದಸ್ಯರು ಮುಂದಾಗಿದ್ದಾರೆ.
ಖಾಸಗೀ ಕಾರ್ ನಲ್ಲಿ ಡ್ಯಾಂನ ಗೇಟ್ ಬಳಿ ಬಂದಾಗ ಜಲಾಶಯದ ಸಮೀಪ 144 ಸೆಕ್ಷನ್ ಜಾರಿ ಇರುವ ಕಾರಣ ಬಾಗಿಲಿಗೆ ಬೀಗ ಜಡಿಯಲಾಗಿದೆ.
ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಹಿನ್ನಲೆ 144 ಸೆಕ್ಷನ್ ಜಾರಿ ಮಾಡಲಾಗಿದ್ದು,ಡ್ಯಾಂ ಗೇಟ್ ತೆರೆಯಲು ಸಿಬ್ಬಂದಿ ತಡೆಯೊಡ್ಡಿದ್ದಾರೆ.
ತುರ್ತು ಚಿಕಿತ್ಸೆ ಸಮಯದಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳ ಆದೇಶವಿದೆ. ಹೀಗಿದ್ದೂ ಅಧಿಕಾರಿಗಳು ಜಲಾಶಯ ರಸ್ತೆ ಮೂಲಕ ತೆರಳಲು ಅನುಮತಿ ನೀಡಿಲ್ಲ. ಸ್ಥಳದಿಂದಲೇ ಜಿಲ್ಲಾಧಿಕಾರಿಗಳನ್ನ ಸಂಪರ್ಕಿಸಿದಾಗ ಸೌಭಾಗ್ಯ ರವರು ಇದ್ದ ಕಾರನ್ನ ಬಿಡುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಾರನ್ನು ಬಿಡಲು ಮುಂದಾದ ಸಿಬ್ಬಂದಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.ಸ್ಥಳೀಯ ಪೊಲೀಸರು ಗೇಟ್ ಬೀಗ ಹೊತ್ತೊಯ್ದಿದ್ದಾರೆ. ಪೊಲೀಸರಿಗೆ ಮಾಹಿತಿ ಮುಟ್ಟಿಸಿ 2 ಗಂಟೆ ಕಾದರೂ ಬೀಗ ಬಂದಿಲ್ಲ.
ಅಧಿಕಾರಿಗಳ ವಿಳಂಬ ಧೋರಣೆಯಿಂದ 2 ಗಂಟೆಗೂ ಹೆಚ್ಚು ಕಾಲ ಸೌಭಾಗ್ಯ ರವರು ಕಾರಿನಲ್ಲೇ ನರಳುವಂತಾಗಿದೆ. ನಂತರ ಡ್ಯಾಂ ಮೂಲಕ ಆಸ್ಪತ್ರೆಗೆ ತೆರಳಲು ಅನುಮತಿ ಸಿಕ್ಕಿದೆ. ಆದ್ರೆ ವಿಳಂಬವಾದ ಕಾರಣ ಆಸ್ಪತ್ರೆ ಸೇರುವ ಮುನ್ನವೇ ಕಾರಿನಲ್ಲೇ ಸಾವನಪ್ಪಿದ್ದಾರೆ.
ಪೊಲೀಸರು ಹಾಗೂ ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯತೆಗೆ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.