Sunday, January 19, 2025

ಕೋಲಾರ ನಗರಾದ್ಯಂತ ನಿರ್ಮಾಣವಾಗಿದೆ ತ್ಯಾಜ್ಯದ ರಾಶಿಗಳು:ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ನಾಗರಿಕರು

ಕೋಲಾರ: ನಗರಾದ್ಯಂತ ತ್ಯಾಜ್ಯ ಸಾಮ್ರಾಜ್ಯ ನಿರ್ಮಾಣವಾಗಿದೆ. ಸಮರ್ಪಕ ಕಸದ ವಿಲೇವಾರಿಯಿಲ್ಲದೆ ನಗರವೆಲ್ಲ ಗಬ್ಬು ನಾರುತ್ತಿದೆ. ಇದೀಗ ಗಾಳಿ ಮತ್ತು ಮಳೆ ಹೆಚ್ಚುತ್ತಿದ್ದಂತೆಯೇ ನಗರದಲ್ಲಿ ರೋಗ-ರುಜಿನದ ಭೀತಿ ಕಾಡುತ್ತಿದೆ.

ಕೋಲಾರ ನಗರಸಭೆಯ ವ್ಯಾಪ್ತಿಯಲ್ಲಿ 35 ವಾರ್ಡ್​ಗಳಿವೆ. ಐದು ಕಿಲೋ ಮೀಟರ್ ಸುತ್ತಳತೆಯ ಕೋಲಾರ ನಗರವನ್ನು ಸ್ವಚ್ಛ ಮಾಡೋದಿಕ್ಕೆ ಬೆರಳೆಣಿಕೆಯಷ್ಟು ಪೌರಕಾರ್ಮಿಕರು ಮಾತ್ರ ಇದ್ದಾರೆ. ಇಂತಹ ನಗರದಲ್ಲಿ ನಿತ್ಯವೂ 70 ಟನ್ ಕಸ ಉತ್ಪಾದನೆಯಾಗುತ್ತಿದೆ. ಆದ್ರೆ, ನಗರಾದ್ಯಂತ ರಸ್ತೆಗೆ ಬೀಳುವ ಕಸದ ವಿಲೇವಾರಿ ಮಾತ್ರ ಸರಿಯಾಗಿ ಆಗುತ್ತಿಲ್ಲ.
ಕೋಲಾರ ನಗರಕ್ಕೆ ಈ ಮೊದಲು ಸ್ವಚ್ಛ ನಗರ ಅನ್ನೋ ಹೆಸರೇನೋ ಇತ್ತು. ಡಿಕೆ.ರವಿ ಅವ್ರು ಜಿಲ್ಲಾಧಿಕಾರಿಯಾಗಿದ್ದಾಗ ಕಸದ ವಿಲೇವಾರಿಗಾಗಿ ಹೊರಗುತ್ತಿಗೆ ಸಿಬ್ಬಂದಿ ಹಾಗೂ ಹೊಸ ವಾಹನಗಳ ಖರೀದಿ ಮಾಡಿದ್ದರು. ಆದ್ರೆ, ಅವೆಲ್ಲ ವ್ಯವಸ್ಥೆಯೂ ಇದೀಗ ಮರೆಯಾಗಿದ್ದು, ನಗರದಲ್ಲಿ ತ್ಯಾಜ್ಯದ ರಾಶಿಗಳು ಕಂಡುಬರುತ್ತಿವೆ.

ಇದೀಗ ಮಳೆಗಾಲ ಶುರುವಾಗಿರೋದ್ರಿಂದ ನಗರದಲ್ಲಿನ ನೈರ್ಮಲ್ಯ ಕಾಪಾಡೋದು ಸವಾಲಿನ ಕೆಲಸವಾಗಿದೆ. ರಸ್ತೆ ಮತ್ತು ಚರಂಡಿಗಳಲ್ಲಿನ ಕಸವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು ಇದೀಗ ನಾಗರಿಕರಿಗೆ ಕಂಟಕವಾಗಿದೆ. ಚರಂಡಿಗಳಲ್ಲಿ ಕೊಳೆಯುತ್ತಿರುವ ಕಸದಿಂದಾಗಿ ರೋಗಗಳು ಹರಡುವ ಭೀತಿಯು ಎದುರಾಗಿದೆ. ಒಟ್ಟಿನಲ್ಲಿ, ಈಗಾಗಲೇ ಮಾರಕ ಕೊರೋನಾ ವೈರಸ್ ಕಾರಣಕ್ಕಾಗಿ ಜನತೆಯು ಆತಂಕದಲ್ಲಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ಕೋಲಾರ ನಗರಸಭೆಯು ತ್ಯಾಜ್ಯ ವಿಲೇವಾರಿಗೆ ಆದ್ಯತೆ ಕೊಡುವ ಮೂಲಕ ನಾಗರೀಕರಲ್ಲಿನ ಭಯವನ್ನು ದೂರ ಮಾಡಬೇಕಾಗಿದೆ.

– ಆರ್.ಶ್ರೀನಿವಾಸಮೂರ್ತಿ

RELATED ARTICLES

Related Articles

TRENDING ARTICLES