ಶಿವಮೊಗ್ಗ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದ ಅಪಾರ ಹಾನಿ ಉಂಟಾಗಿದ್ದು ಮನೆಗಳಿಗೆ ಹಾನಿಯಾದಲ್ಲಿ ಅಥವಾ ಕುಸಿದು ಬಿದ್ದಲ್ಲಿ ತಕ್ಷಣಕ್ಕೆ ಎಲ್ಲರಿಗೂ 10 ಸಾವಿರ ರೂ. ಪರಿಹಾರ ನೀಡಬೇಕು. ಪೂರ್ತಿ ಹಾನಿಗೊಂಡ ಮನೆಗಳಿಗೆ ತಕ್ಷಣಕ್ಕೆ 1 ಲಕ್ಷ ರೂ.ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅತೀವೃಷ್ಠಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಬಿದ್ದ ಮನೆಯಲ್ಲೇ ವಾಸ ಮಾಡಲು ಬಿಡಬೇಡಿ, ತಕ್ಷಣವೇ ಬಿದ್ದಿರುವ ಮನೆಯಿಂದ ಕುಟುಂಬಗಳನ್ನು ಖಾಲಿ ಮಾಡಿಸಲು ಸೂಚಿಸಿದರು. ಜಿಲ್ಲೆಯಲ್ಲಿ 65 ಮನೆಗಳು ಇದುವರೆಗೂ ಬಿದ್ದಿದ್ದು ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ ನೀಡಿ, ಆದರೆ ತರಾತುರಿಯಲ್ಲಿ ಮನೆ ಹಾನಿ ವರದಿ ತಯಾರಿಸಬೇಡಿ. ಏಕೆಂದರೆ ಇನ್ನೂ ಸುರಿಯುತ್ತಿರುವ ಮಳೆಗೆ ಹೆಚ್ಚಿನ ಹಾನಿಯಾದಾಗ ಬಡ ಸಂತ್ರಸ್ಥರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪರಿಸ್ಥಿತಿ ನೋಡಿ ವರದಿ ಮಾಡಿ, ಪೂರ್ತಿ ಮನೆ ಹಾನಿಗೊಳಗಾದರೆ ತಕ್ಷಣಕ್ಕೆ 1 ಲಕ್ಷ ಪರಿಹಾರ ನೀಡಿ, ಬಳಿಕ ಹೆಚ್ಚುವರಿ 4 ಲಕ್ಷ ರೂ. ಮನೆ ಕಟ್ಟುವ ಹಂತದಲ್ಲಿ ನೀಡುವಂತೆ ಸೂಚಿಸಿದ್ರು.
ಶೃಂಗೇರಿಯಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ತುಂಗಾನದಿಯ ಒಳ ಹರಿವು ಹೆಚ್ಚಾಗಿರುವುದರಿಂದ ಗಾಜನೂರು ಡ್ಯಾಂನಿಂದ ಬಿಡುವ ನೀರಿನ ಹೊರಹರಿವು ಕೂಡ ಹೆಚ್ಚಾಗುವ ಸಂಭವವಿದ್ದು, ನಗರ ವ್ಯಾಪ್ತಿಯಲ್ಲಿ ಅಪಾಯದ ಸೂಚನೆ ಇದ್ದು, ಪಾಲಿಕೆ ವತಿಯಿಂದ ತುರ್ತು ಪರಿಸ್ಥಿತಿ ನಿರ್ವಹಿಸಲು ಈಗಾಗಲೇ 6 ಕಡೆ ಕಾಳಜಿ ಕೇಂದ್ರವನ್ನ ಗುರುತಿಸಲಾಗಿದೆ. ಇಮಾಂ ಬಾಡಾದಲ್ಲಿ 2, ಗಾಂಧಿ ಬಜಾರ್‍ನ ತುಳಜಾ ಭವಾನಿ, ಕನ್ನಿಕಾ ಪರಮೇಶ್ವರಿ, ಜೈನ್ ಸಮುದಾಯ ಭವನ, ಹಾಗೂ ಆರ್.ಎಂ.ಎಲ್ ನಗರದ ಶಾದಿ ಮಹಲ್‍ಗಳನ್ನು ಕಾಳಜಿ ಕೇಂದ್ರವೆಂದು ಗುರುತಿಸಲಾಗಿದೆ. ಮಳೆ ಹೆಚ್ಚಾದರೆ ಇವು ಸಾಕಾಗದು ಈ ಕಾಳಜಿ ಕೇಂದ್ರವನ್ನ ಹೆಚ್ಚಿಸಲು ಸಹ ಸಚಿವರು ಸೂಚಿಸಿದ್ರು.
ಅದರಂತೆ, ತೀರ್ಥಹಳ್ಳಿ ಮತ್ತು ಹೊಸನಗರ ಭಾಗದಲ್ಲಿ ವಿದ್ಯುತ್ ಸಮಸ್ಯೆಯಾಗಿದ್ದು, ತೀವ್ರ ಮಳೆ ಗಾಳಿಗೆ ಆ ಭಾಗದಲ್ಲಿ 3500 ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇಲ್ಲಿಯವರೆಗೆ ಹೊಸನಗರ 21, ಸಾಗರ 38, ಸೊರಬ 24, ಶಿಕಾರಿಪುರ 27 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಎಲ್ಲ ತಾಲ್ಲೂಕುಗಳಲ್ಲೂ ತುರ್ತಾಗಿ ಕಾಳಜಿ ಕೇಂದ್ರವನ್ನು ಸ್ಥಾಪಿಸುವಂತೆ ಸಚಿವ ಈಶ್ವರಪ್ಪ ಸೂಚಿಸಿದ್ರು.