ನವದೆಹಲಿ : IPL 2020ಗೆ ಇನ್ನು ಕೇವಲ 44 ದಿನ ಮಾತ್ರ ಬಾಕಿ ಇದೆ. ಯುಎಇನಲ್ಲಿ ಸೆಪ್ಟೆಂಬರ್ 19ರಿಂದ IPL ಹಬ್ಬ ಆರಂಭವಾಗಲಿದೆ. ಈ ನಡುವೆ ಬಿಸಿಸಿಐ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದ್ದ ಚೀನಾದ VIVO ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದುಮಾಡಿಕೊಂಡಿದೆ.
IPL ಶೀರ್ಷಿಕೆ ಪ್ರಾಯೋಜಕತ್ವವನ್ನು VIVO ಮುಂದುವರೆಸುವುದನ್ನು ವಿರೋಧಿಸಿ ಕ್ರಿಕೆಟ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಐಪಿಎಲ್ ಬಹಿಷ್ಕಾರ ಅಭಿಯಾನ ಶುರುಮಾಡಿದ್ದರು. ಹೀಗೆ ವಿವೋ ಪ್ರಾಯೋಜಕತ್ವಕ್ಕೆ ತೀರಾ ವಿರೋಧ ಕಂಡುಬಂದಿದ್ದರಿಂದ ಬಿಸಿಸಿಐ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ವಿವೋ ಪ್ರಾಯೋಜಕತ್ವವನ್ನು ರದ್ದು ಮಾಡಿದೆ.
ಅಭಿಮಾನಿಗಳ ಭಾವನೆ ಮಂಡಳಿಗೆ ಮೊದಲ ಆದ್ಯತೆ ಹಾಗೂ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗುತ್ತದೆ. ಹಾಗಾಗಿ ವಿವೋ ಪ್ರಾಯೋಜಕತ್ವವನ್ನು ರದ್ದುಗೊಳಿಸಿರುವುದಾಗಿ ಬಿಸಿಸಿಐ ತಿಳಿಸಿದೆ.
ವಿವೋ ಐಪಿಎಲ್ ಪ್ರಾಯೋಜಕತ್ವ ಶೀರ್ಷಿಕೆ ಪಡೆದು ಬಿಸಿಸಿಐನೊಂದಿಗೆ 5 ವರ್ಷಗಳಿಗೆ 2,199 ಕೋಟಿ ರೂ ಒಪ್ಪಂದ ಮಾಡಿಕೊಂಡಿತ್ತು. ಈಗ ಎರಡು ವರ್ಷಗಳ ಒಪ್ಪಂದ ಮುಗಿದಿದೆ. ಈ ಬಾರಿ ಬಿಸಿಸಿಐ ವಿವೋ ಪ್ರಾಯೋಜಕತ್ವ ಬೇಡ ಅಂದಿದ್ದು ಬಾಕಿ ಇರುವ 1,320 ಕೋಟಿ ರೂಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಸ್ಪಷ್ಟನೆ ಸಿಗಲಿದೆ.