ಶಿವಮೊಗ್ಗ : ಮಲೆನಾಡು ಜಿಲ್ಲೆ ಶಿವಮೊಗ್ಗದ ಹೊಸನಗರ ತಾಲೂಕಿನಾದ್ಯಂತ ಆಶ್ಲೇಷ ಮಳೆಯ ಅಬ್ಬರ ಶುರುವಾಗುತ್ತಿದ್ದಂತೆ, ಮಾಯವಾದ ಕರೆಂಟ್ ಮೂರು ದಿನಗಳಾದರೂ ಬಾರದ ಕಾರಣ ಇಡೀ ತಾಲೂಕಿನ ಜನತೆ ಬದಲಿ ಸಂಪರ್ಕ ಸಾಧನವಿಲ್ಲದೆ ಹೈರಾಣಾಗಿದ್ದಾರೆ. ಎಲ್ಲರ ಮೊಬೈಲ್ ಫೋನ್ ಗಳು ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿದ್ದು ಟಿವಿಗಳು ಮೂಲೆ ಸೇರಿವೆ, ಯುಪಿಎಸ್ ಗಳು ನಿಸ್ತೇಜಗೊಂಡಿದ್ದು, ಲಾಕ್ ಡೌನ್ ನಿಂದಾಗಿ ಬೆಂಗಳೂರಿಂದ ಊರಿಗೆ ಬಂದು ವರ್ಕ್ ಫ್ರಂ ಹೋಂ ಮಾಡುತ್ತಿದ್ದವರು ವಿದ್ಯುತ್ ಸಂಪರ್ಕವಿಲ್ಲದೆ, ಹಾಗೂ ನೆಟ್‌ವರ್ಕ್ ಇಲ್ಲದ ಕಾರಣ ಅವರುಗಳು ಕೆಲಸ ಮಾಡಲಾಗದೆ ಕೈ-ಕೈ ಹಿಸುಕಿಕೊಳ್ಳುವಂತಾಗಿದೆ.
ಕಳೆದ ಮೂರು ದಿನಗಳಿಂದ ಕರೆಂಟ್ ಇಲ್ಲದ ಕಾರಣ, ವಿದ್ಯುತ್ ಪಂಪ್ ಮೂಲಕ ಸರಬರಾಜಾಗುತ್ತಿದ್ದ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದ್ದು ತಾಲೂಕಿನಾದ್ಯಂತ ಪಟ್ಟಣ ಹಾಗೂ ಗ್ರಾಮೀಣ ಜನರು ತೊಂದರೆಗೀಡಾಗಿದ್ದಾರೆ. ಈ ವಿದ್ಯುತ್ ಸಮಸ್ಯೆಯಿಂದಾಗಿ, ಮನೆಗಳಲ್ಲಿ ಮತ್ತು ಹೊಟೆಲ್ ಗಳಲ್ಲಿ ಆಹಾರ ಪದಾರ್ಥ ತಯಾರಿಕೆಗೂ ತೊಂದರೆಯುಂಟಾಗಿದೆ.
ಇನ್ನು ಈಗ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಇದೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಿದ್ದು, ಈ ವ್ಯವಸ್ಥೆಯು ಕೂಡ ಎಕ್ಕುಟ್ಟಿ ಹೋಗಿದೆ.
ಈ ಎಲ್ಲದಕ್ಕೂ ಮೂಲವಾದ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಮೆಸ್ಕಾಂ ಇಲಾಖೆ ಮುಂಜಾಗ್ರತೆ ತೊಡಕಿನಿಂದ ಉಂಟಾದ ಪರಿಸ್ಥಿತಿಗೆ ಜನರು ಹಿಡಿಶಾಪ ಹಾಕುವಂತಾಗಿದೆ.
ಗಾಳಿ ಮಳೆಯ ನಡುವೆ ಮೆಸ್ಕಾಂ ಸಿಬ್ಭಂಧಿಗಳು ರಿಪೇರಿ ಕಾರ್ಯ ನಡೆಸುತ್ತಿದ್ದು, ಮಲೆನಾಡಿನಲ್ಲಿ ವಿದ್ಯುತ್ ಸಂಪರ್ಕಕ್ಕೆ ಅಂಡರ್ ಗ್ರೌಂಡ್ ಕೇಬಲ್ ವ್ಯವಸ್ಥೆ ಸೂಕ್ತವಾಗಿದ್ದು ಇನ್ನು ಮುಂದಾದರೂ ಮೆಸ್ಕಾಂ ಇಲಾಖೆ ಎಚ್ಚೆತ್ತು ಬದಲಿ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.