Monday, January 20, 2025

ಗುಂಡೇಟಿಗೆ ಅರಣ್ಯ ಸಿಬ್ಬಂದಿ ಬಲಿ; ಕಾಡಾನೆಗಳನ್ನು ಕಾಡಿಗಟ್ಟುವ ವೇಳೆ ಅವಘಡ

ಮಂಡ್ಯ : ಕಾಡಾನೆಗಳನ್ನು ಓಡಿಸುವ ವೇಳೆ ನಡೆದ ಅವಘಡದಲ್ಲಿ ಅರಣ್ಯ ಇಲಾಖೆಯ ಗುತ್ತಿಗೆ ನೌಕರರೊಬ್ಬರು ಗುಂಡೇಟಿಗೆ ಬಲಿಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದ ಹೊರವಲಯದಲ್ಲಿ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ಸೊಲಬ ಗ್ರಾಮದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಶಿವನಂಜಯ್ಯ(30) ಮೃತಪಟ್ಟ ಸಿಬ್ಬಂದಿ. ಗಾರ್ಡ್ ಪ್ರಕಾಶ್ ಅಚಡದ ಎಂಬುವವರ ಬಂದೂಕಿನಿಂದ ಗುಂಡು ಹಾರಿ ಈ ಅವಘಡ ಸಂಭವಿಸಿದೆ. ಶಿಂಷಾ ಅರಣ್ಯ ಪ್ರದೇಶದಿಂದ ಹತ್ತು ಆನೆಗಳ ಹಿಂಡು ಕೂನನಕೊಪ್ಪಲು ಗ್ರಾಮದ ತೋಪಿನಲ್ಲಿ ಬೀಡು ಬಿಟ್ಟಿದ್ದವು. ಕಾಡಾನೆಗಳನ್ನು ಕಾಡಿನತ್ತ ಓಡಿಸುವ ವೇಳೆ ಆನೆಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳತ್ತ ದಾಳಿಗೆ ಮುಂದಾದ ಸಂದರ್ಭದಲ್ಲಿ ಸಿಬ್ಬಂದಿಗಳು ಭಯದಿಂದ ಓಡಿದ್ದಾರೆ.
ಈ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ಶಿವನಂಜಯ್ಯರ ಬೆನ್ನಿಗೆ ಹೊಕ್ಕಿದೆ. ಇದರಿಂದಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ.
ಆಸ್ಪತ್ರೆಗೆ ಪ್ರಭಾರ ಡಿವೈಎಸ್ಪಿ ನವೀನ್, ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಡಿ.ಪಿ.ಧನರಾಜ್, ಪಿಎಸ್ಐ ಎಚ್.ಡಿ. ಮಂಜು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

….
ಡಿ.ಶಶಿಕುಮಾರ್, ಮಂಡ್ಯ.

RELATED ARTICLES

Related Articles

TRENDING ARTICLES