ಮಂಡ್ಯ : ಶ್ರೀರಾಮಚಂದ್ರ ತನ್ನ ವನವಾಸದ ಅವಧಿಯಲ್ಲಿ ಲಕ್ಷ್ಮಣ ಮತ್ತು ಸೀತೆಯ ಸಮೇತ ಸಕ್ಕರೆ ನಾಡು ಮಂಡ್ಯಕ್ಕೂ ಬಂದಿದ್ದ ಪ್ರತೀತಿ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಆ ಪ್ರದೇಶದಲ್ಲಿ ಶ್ರೀರಾಮನ ಗುರುತು ಇದ್ದು, ಇಂದಿಗೂ ಆ ಪ್ರದೇಶದಲ್ಲಿನ ಲೀಲೆ ಜನರನ್ನು ಮಂತ್ರ ಮುಗ್ದಗೊಳಿಸುತ್ತಿದೆ. ಆ ಒಂದು ಪ್ರದೇಶ ಪುರಾಣ ಪ್ರಸಿದ್ಧ, ಐತಿಹಾಸಿಕ ಧಾರ್ಮಿಕ ಸ್ಥಳವಾಗಿದೆ.
ಹೌದು! ತ್ರೇತಾ ಯುಗದಲ್ಲಿ ಸೀತಾಮಾತೆ ಹಾಗೂ ಲಕ್ಷ್ಮಣನೊಂದಿಗೆ ಶ್ರೀರಾಮ 14 ವರ್ಷ ವನವಾಸ ಕೈಗೊಂಡು, ಕರ್ನಾಟಕ ಸೇರಿದಂತೆ ಭಾರತದ ಹಲವು ಅರಣ್ಯಗಳಲ್ಲಿ ಸಂಚಾರ ಮಾಡಿದ್ದನು ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ವನವಾಸದ ವೇಳೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಐತಿಹಾಸಿಕ ಹಾಗೂ ಪುರಾಣಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರೋ ಮೇಲುಕೋಟೆ ಮಾರ್ಗವಾಗಿ ಸಂಚರಿಸಿದ್ದ ಎಂಬ ಪ್ರತೀತಿ ಇದೆ. ಶ್ರೀ ರಾಮ ಭೇಟಿ ನೀಡಿದ್ದ ಆ ಜಾಗದಲ್ಲಿ ಇಂದಿಗೂ ಕುರುಹುಗಳಿವೆ. ಇಂದಿಗೂ ವಿಸ್ಮಯ ತಾಣವಾಗಿಯೇ ಉಳಿದಿದೆ ಮೇಲುಕೋಟೆಯ ಧನುಷ್ಕೋಟಿ; ಇನ್ನು ದಟ್ಟ ಅರಣ್ಯ ಪ್ರದೇಶವಾಗಿದ್ದ ಮೇಲುಕೋಟೆ ಮಾರ್ಗವಾಗಿ ಸಂಚರಿಸುವಾಗ ಸೀತೆ, ರಾಮ, ಲಕ್ಷ್ಮಣರು ವಿಶ್ರಾಂತಿಗೆಂದು ಎತ್ತರದ ಬಂಡೆ ಮೇಲೆ ಕುಳಿತುಕೊಳ್ಳುತ್ತಾರೆ. ಆ ವೇಳೆ ಸೀತೆಗೆ ಬಾಯಾರಿಕೆಯಾದಾಗ ಬಂಡೆಗೆ ಬಾಣ ಬಿಟ್ಟು ನೀರು ಚಿಮ್ಮಿಸುವಂತೆ ಸಹೋದರ ಲಕ್ಷ್ಮಣನಿಗೆ ಸೂಚಿಸುತ್ತಾನೆ. ಅದರಂತೆ ಬಂಡೆಗೆ ಲಕ್ಷ್ಮಣ ಬಾಣ ಬಿಟ್ಟಾಗ ನೀರು ಬರೋದಿಲ್ಲ. ಕೊನೆಗೆ ಶ್ರೀರಾಮನೇ ತನ್ನ ಧನುಷುನಿಂದ ಬಾಣ ಬಿಟ್ಟು ನೀರು ಚಿಮ್ಮಿಸುತ್ತಾನೆ. ಆ ನೀರು ಕುಡಿದ ಸೀತೆ ದಾಹ ತೀರಿಸಿಕೊಳ್ಳುತ್ತಾಳೆ. ರಾಮ ಧನುಷಿನಿಂದ ಬಂಡೆಗೆ ಬಾಣ ಬಿಟ್ಟಿದ್ದರಿಂದಾಗಿ ಈ ಜಾಗಕ್ಕೆ ಧನುಷ್ಕೋಟಿ ಎಂದು ಹೆಸರು ಬಂತು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇಲ್ಲಿನ ಜನರೂ ಅದನ್ನೇ ನಂಬಿಕೊಂಡಿದ್ದಾರೆ.
ಬೇಸಿಗೆಯಲ್ಲೂ ನೀರು ಕಡಿಮೆಯಾಗದೆ ವಿಸ್ಮಯ..!
ಇನ್ನು ಈ ಸ್ಥಳ ಇಂದಿಗೂ ವಿಸ್ಮಯದಿಂದ ಕೂಡಿದೆ. ಎಷ್ಟೇ ಮಳೆ ಬಂದ್ರೂ ಇಲ್ಲಿನ ನೀರಿನ ಪ್ರಮಾಣ ಮಾತ್ರ ಹೆಚ್ಚಾಗಲ್ಲ. ಅಲ್ಲದೇ ಅದೆಂತಹ ಬಿರು ಬೇಸಿಗೆಯಲ್ಲೂ ಸ್ವಲ್ಪವೂ ನೀರು ಕಡಿಮೆಯಾಗಿಲ್ಲ. ಇಲ್ಲಿ ನಿಂತಿರೋ ನೀರು ಎಂದಿಗೂ ಹೆಚ್ಚು ಆಗಲ್ಲ, ಕಡಿಮೆಯೂ ಆಗಲ್ಲ. ಈ ವಿಸ್ಮಯ ಕಂಡವರು ಅಚ್ಚರಿ ಪಡುತ್ತಾರೆ. ಅಲ್ಲದೆ ವೈಜ್ಞಾನಿಕ ಲೋಕಕ್ಕೂ ಇದು ಸವಾಲಾಗಿದೆ ಅಂತಾರೆ ಇತಿಹಾಸ ತಜ್ಞ ಶೆಲ್ವಪಿಳ್ಳೈ ಅಯ್ಯಂಗಾರ್.
ಇನ್ನು ಉತ್ತರ ಭಾರತದ ಸಂಸ್ಥೆಯೊಂದು ರಾಮ ಅಯೋಧ್ಯೆಯಿಂದ ವನವಾಸದ ಅವಧಿಯಲ್ಲಿ ಸಂಚರಿಸಿದ್ದ ಸ್ಥಳಗಳನ್ನು ಗುರುತಿಸಿ ಮ್ಯಾಪ್ ಮಾಡಿದ್ದಾರೆ. ಆ ಭೂಪಟದಲ್ಲಿ ಮೇಲುಕೋಟೆಗೂ ರಾಮ ಬಂದುಹೋಗಿರುವುದಾಗಿ ನಮೂದೆ ಮಾಡಲಾಗಿದೆ.
ಮಂಡ್ಯದ ಮೇಲುಕೋಟೆ ಅರಣ್ಯ ಪ್ರದೇಶಕ್ಕೆ ಸೀತಾರಣ್ಯ ಎಂದೂ ಕರೆಯಲಾಗುತ್ತದೆ. ಧನುಷ್ಕೋಟಿ ಧಾರ್ಮಿಕ ತಾಣವಾಗಿ ರೂಪುಗೊಂಡಿದ್ದು, ನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿನಿತ್ಯ ಇಲ್ಲಿಗೆ ಪ್ರವಾಸಿಗರು ಇಲ್ಲಿರೋ ನೀರಿನಿಂದ ಪ್ರೋಕ್ಷಣೆ ಮಾಡಿಕೊಂಡು ಶ್ರೀರಾಮನನ್ನು ನೆನೆಯೋದು ಮಾತ್ರ ಸುಳ್ಳಲ್ಲ.
…..
ಡಿ.ಶಶಿಕುಮಾರ್, ಮಂಡ್ಯ.