ಶಿವಮೊಗ್ಗ : ಕಳೆದ 48 ಗಂಟೆಗಳಿಂದ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಕೆರೆಕಟ್ಟೆಗಳಿಗೂ ಸಹ ನೀರು ಬಂದಿದ್ದು, ನೆರೆಯ ಭೀತಿ ಎದುರಾಗಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಸೇರಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ತುಂಗಾ ನದಿಗೆ ನೀರು ಹರಿದುಬರುತ್ತಿದ್ದು, ಶಿವಮೊಗ್ಗದ ಕೋರ್ಪಲಯ್ಯನ ಛತ್ರದ ಬಳಿ ಇರುವ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಮಂಟಪ ಮುಳುಗಡೆಯಾಗಿದೆ ಎಂದರೆ ಮಲೆನಾಡಿನಲ್ಲಿ ಹೆಚ್ಚು ಮಳೆಯಾಗಿದೆ ಎಂದೇ ಅರ್ಥ. ತುಂಗಾ ಡ್ಯಾಂ ಈಗಾಗಲೇ ತುಂಬಿದ್ದು, ಅಣೆಕಟ್ಟೆಯಿಂದ 43,385 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ 44.60 ಮಿ.ಮೀ., ಭದ್ರಾವತಿಯಲ್ಲಿ 64.40 ಮಿ.ಮೀ., ತೀರ್ಥಹಳ್ಳಿಯಲ್ಲಿ 363.40 ಮಿ.ಮಿ., ಸಾಗರ ತಾಲ್ಲೂಕಿನಲ್ಲಿ 151.54 ಮಿ.ಮೀ., ಶಿಕಾರಿಪುರದಲ್ಲಿ 56.40 ಮಿ.ಮಿ., ಸೊರಬದಲ್ಲಿ 214.40 ಮಿ.ಮೀ., ಹೊಸನಗರದಲ್ಲಿ ಅತಿ ಹೆಚ್ಚು 482.60 ಮಿ.ಮಿ., ಸರಾಸರಿ ಜಿಲ್ಲೆಯಲ್ಲಿ 203.31 ಮಿ.ಮೀ., ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ 1776.60 ಅಡಿ (ಗರಿಷ್ಟ 1819 ಅಡಿ) ನೀರು ಇದ್ದು, 62,003 ಕ್ಯೂಸೆಕ್ ಒಳಹರಿವು ಇದೆ. ಜಲಾನಯನ ಪ್ರದೇಶದಲ್ಲಿ 159.80 ಮಿ.ಮೀ., ಮಳೆಯಾಗಿದೆ. ಭದ್ರಾ ಜಲಾಶಯದಲ್ಲಿ 153.30 ಅಡಿ (186 ಗರಿಷ್ಟ) ನೀರು ಇದ್ದು, 22,203 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 2,180 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ 78.40 ಮಿ.ಮೀ., ಮಳೆಯಾಗಿದೆ. ತುಂಗಾ ಜಲಾಶಯದಲ್ಲಿ ಗರಿಷ್ಟ ಮಟ್ಟ 528.84 ಅಡಿ ನೀರಿದ್ದು, 43385 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.